ಚೀನೀ ಶಿಕ್ಷಣ ಪದ್ಧತಿ

	ಭಾರತ, ಗ್ರೀಸ್, ರೋಮ್ ಮುಂತಾದ ದೇಶಗಳಂತೆ ಚೀನವೂ ಪ್ರಾಚೀನ ನಾಗರಿಕತೆಗೆ ಹೆಸರಾಗಿದ್ದು ಅನೇಕ ಪೌರಸ್ತ್ಯ ದೇಶಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತ ಬಂದಿದೆ. ಎರಡೂವರೆ ಸಹಸ್ರವರ್ಷಗಳ ಹಿಂದೆಯೇ ಅದು ಸಾಂಸ್ಕøತಿಕ ಕ್ಷೇತ್ರದಲ್ಲಿ ಶಿಕ್ಷಣದ ಪ್ರಭಾವವನ್ನು ಕಂಡುಕೊಂಡಿತ್ತು. ಕ್ರಿ.ಪೂ. 551-479ರಲ್ಲಿ ಬದುಕಿದ್ದ ತತ್ತ್ವಚಿಂತಕ, ಕಾನ್‍ಫ್ಯೂಷಸನ ಪ್ರಭಾವ ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಮಾನವನ ಸ್ವಭಾವಕ್ಕೆ ಸಂಬಂಧಿಸಿದ ತತ್ತ್ವಗಳಿಗೂ ಸಾಮಾಜಿಕ ಆದರ್ಶಗಳಿಗೂ ಅವನ ದೃಷ್ಟಿಯನ್ನು ರಾಷ್ಟ್ರ ಆಧಾರ ಮಾಡಿಕೊಂಡಿತ್ತು. ನೈತಿಕ ಪರಿಪೂರ್ಣತೆಯನ್ನು ಸಾಧಿಸಲು ಮಾನವತ್ವಕ್ಕೆ ಸಂದಿರುವ ವಿಶಿಷ್ಟ ಲಕ್ಷಣಗಳನ್ನು ಅರಿಯುವುದು ಅಗತ್ಯ. ಹಾಗೆ ಸಾಧಿಸಿದ ಜ್ಞಾನ ಅವನಿಗೆ ನಿಸರ್ಗದೊಡನೆಯೂ ಇತರ ಮಾನವರೊಡನೆಯೂ ಸಮರಸವಾಗಿ ನಡೆದುಕೊಳ್ಳುವ ವಿವೇಕವನ್ನೊದಗಿಸುವುದಲ್ಲದೆ ಸಮಾಜವನ್ನು ವಿಹಿತಮಾರ್ಗದಲ್ಲಿ ನಿರ್ದೇಶಿಸುವ ಶಕ್ತಿಯನ್ನೂ ದೃಷ್ಟಿ ಧ್ಯೇಯಗಳನ್ನೂ ದೊರಕಿಸುತ್ತದೆ. ಸ್ವಭಾವತಃ ಎಲ್ಲ ಮಾನವರೂ ಏಕರೀತಿಯಾಗಿದ್ದರೂ ಅನುಭವ ಅಥವಾ ಅಭ್ಯಾಸಗಳು ಅವರಲ್ಲಿ ಭಿನ್ನತೆಯನ್ನು ಕಲ್ಪಿಸುವುವು. ನಾಯಕನ ಗುಣಶೀಲಗಳೂ ನಡೆನುಡಿಗಳೂ ಇತರರ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುವುದರಿಂದ ನಾಯಕರಾಗತಕ್ಕವರು ನೈತಿಕ ಮಹಾದರ್ಶವನ್ನು ಸಾಧಿಸಬೇಕು. ಅದಕ್ಕೆ ಉಚಿತ ಶಿಕ್ಷಣವೇ ರಾಜಮಾರ್ಗ-ಇದು ಕಾರ್ನಫ್ಯೂಷಸನ ಅಭಿಮತ. ಆದ್ದರಿಂದ ಅನಂತರದ ದಿನಗಳಲ್ಲಿ ಆರಂಭವಾದ ಸಾಮ್ರಾಜ್ಯ ಯುಗದಲ್ಲಿ ಅವನ ತತ್ತ್ವದೃಷ್ಟಿಯನ್ನು ಅಳರಸರು ಆಧಾರ ಮಾಡಿಕೊಂಡರು. ಅದರಂತೆ ಕಾನಫ್ಯೂಷಸನ ತತ್ತ್ವವನ್ನು ಅರಿತಿದ್ದು ನೈತಿಕ ಸಂಸ್ಕಾರವನ್ನು ಪಡೆದಿದ್ದವರನ್ನು ಆಯ್ದು ರಾಜ್ಯದ ಸಾರ್ವಜನಿಕ ಸ್ಥಾನಗಳಿಗೆ ನೇಮಿಸುವ ಸಂಪ್ರದಾಯವನ್ನು ಅನುಷ್ಠಾನಕ್ಕೆ ತಂದರು. ಅದರ ಫಲವಾಗಿ ಇಡೀ ಸಾಮ್ರಾಜ್ಯದಲ್ಲಿ ಒಂದು ರೀತಿಯ ನೈತಿಕ ಆದರ್ಶ ಸಾಧನೆಯ ಸ್ಪರ್ಧೆ ಆರಂಭವಾಯಿತು. ಆ ಸ್ಪರ್ಧೆಯಲ್ಲಿ ವಿಜಯ ಗಳಿಸಲು ಜ್ಞಾನಾರ್ಜನೆ ರಾಜಮಾರ್ಗವೆನಿಸಿದ್ದು, ಶಿಕ್ಷಣ, ರಾಷ್ಟ್ರದಲ್ಲಿ ಆದ್ಯತೆಯ ವ್ಯವಸ್ಥೆಯಾಯಿತು. ಸಾಮಾನ್ಯವಾಗಿ ಅಂದು ನಾಯಕರಾಗತಕ್ಕವರು ಶ್ರೀಮಂತ ಸಮಾಜಕ್ಕೆ ಸೇರಿದ್ದು ಅವರು ಮಾತ್ರ ಕಾನ್‍ಫ್ಯೂಷಸನ ತತ್ತ್ವದೃಷ್ಟಿಯನ್ನು ಅರಿತವರಾಗಿದ್ದರು. ಆದ್ದರಿಂದ ಸ್ಪರ್ಧೆಯಲ್ಲಿ ಅವರಿಗೆ ಜಯವಾಗಿ ಅವರು ಮಾತ್ರ ಮಾನ್ಯತೆಯ ಸ್ಥಾನಗಳನ್ನು ಆಕ್ರಮಿಸುವಂತಾಗುತ್ತಿತ್ತು. ಈ ಸಂಭವವನ್ನು ತಪ್ಪಿಸಲು ಅವನು ಎಲ್ಲರಿಗೂ ಶಿಕ್ಷಣ ಸೌಲಭ್ಯವನ್ನು ಪ್ರತಿಪಾದಿಸಿ, ಸಾಮಾನ್ಯರೂ ಜ್ಞಾನಾರ್ಜನೆಮಾಡಿ ಸಾರ್ವಜನಿಕ ಸ್ಥಾನಗಳನ್ನಲಂಕರಿಸಬಹುದಾದ ಅವಕಾಶವನ್ನು ಕಲ್ಪಿಸಿದ್ದನು. ಎಂದರೆ ವ್ಯಕ್ತಿಗಳಿಗೆ ನೀಡತಕ್ಕ ಗೌರವ ಜನ್ಮವನ್ನವಲಂಬಿಸಿದರೆ ಆಯಾ ವ್ಯಕ್ತಿಯ ದಕ್ಷತೆಯನ್ನು ಆಧಾರ ಮಾಡಿಕೊಳ್ಳಬೇಕೆಂಬ ವಾದವನ್ನು ಅವನು ಎತ್ತಿ ಹಿಡಿದಿದ್ದನು. ಕಾನ್‍ಫ್ಯೂಷಸನ ಈ ತತ್ತ್ವದೃಷ್ಟಿ ಪ್ರಾಚೀನ ಚೀನದ ಶಿಕ್ಷಣದ ಸ್ವರೂಪವನ್ನು ರೂಪಿಸಿದ್ದಲ್ಲದೆ ಅದಕ್ಕೆ ರಾಷ್ಟ್ರದಲ್ಲೂ ಸಮಾಜದಲ್ಲೂ ಗೌರವದ ಸ್ಥಾನವನ್ನು ದೊರಕಿಸಿಕೊಟ್ಟಿತು. ಅವನ ಈ ಪ್ರಭಾವ ಚೀನೀ ಶಿಕ್ಷಣದ ಮೇಲೆ ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದವರೆಗೂ ನಡೆದುಬಂತೆನ್ನಬಹುದು.

	ಪ್ರಾಚೀನ ಚೀನದಲ್ಲಿ ಶಿಕ್ಷಣ : ಕಾನ್‍ಫ್ಯೂಷಸನ ತತ್ತ್ವದೃಷ್ಟಿಯನ್ನೊಪ್ಪಿದ ಸಾಮ್ರಾಜ್ಯ ಸರ್ಕಾರ ಕ್ರಿ.ಪೂ. ಮೂರನೆಯ ಶತಮಾನದಲ್ಲೇ ಆಡಳಿತದ ಉನ್ನತ ಸ್ಥಾನಗಳಿಗೆ ಅತ್ಯಂತ ದಕ್ಷರಾದವರನ್ನು ಆರಿಸಲು ಪರೀಕ್ಷಾಪದ್ಧತಿಯನ್ನು ಆಚರಣೆಗೆ ತಂದಿತು. ಕ್ರಿ.ಪೂ. 202ರಿಂದ ಕ್ರಿ.ಶ. 220 ರವರೆಗೆ ಅಸ್ತಿತ್ವದಲ್ಲಿದ್ದ ಹಾನ್ ವಂಶದವರು ಮೊಟ್ಟಮೊದಲು ಅದನ್ನು ಅದರ ಮೂಲಸ್ವರೂಪದಲ್ಲಿ ಆರಂಭಿಸಿದರು. ವಿಶಾಲ ಭೂಭಾಗದಲ್ಲಿ ಹರಡಿದ್ದ ಸಾಮ್ರಾಜ್ಯದ ಆಡಳಿತಕ್ಕಾಗಿ ಲಕ್ಷಾಂತರ ಮಂದಿ ಅಧಿಕಾರಿಗಳನ್ನು ಅರಿಸಬೇಕಾಗಿತ್ತು. ಮೊದಮೊದಲು ಸಚಿವರೂ ಖ್ಯಾತವ್ಯಕ್ತಿಗಳೂ ಸಾಮಾಜಿಕ ಸಂಘಗಳೂ ನೀಡುತ್ತಿದ್ದ ಅರ್ಹತಾ ಪತ್ರಗಳನ್ನು ಆಧಾರ ಮಾಡಿಕೊಂಡು ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆರಿಸುತ್ತಿದ್ದರೂ ಕ್ರಮಕ್ರಮವಾಗಿ ಸಂದರ್ಶನ ಮತ್ತು ವಿಧಿವತ್ತಾದ ಪರೀಕ್ಷೆಗಳನ್ನು ಆ ಕಾರ್ಯಕ್ಕಾಗಿ ಅನುಸರಿಸತೊಡಗಿದರು. ವೈಯಕ್ತಿಕವಾಗಿ ಅವರ ನೈತಿಕ ನಿಷ್ಠೆಯನ್ನೂ ಆಧಾರ ಮಾಡಿಕೊಳ್ಳುತ್ತಿದ್ದರು. ಚಕ್ರವರ್ತಿಗಳೇ ದೊಡ್ಡ ದೊಡ್ಡ ಸ್ಥಾನಗಳಿಗೆ ಸ್ವತಃ ರಾಜಧಾನಿಯಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ಯೋಗ್ಯತೆ ನಿರ್ಧರಿಸುತ್ತಿದ್ದರು. ಅಭ್ಯರ್ಥಿಗಳ ನೈತಿಕ ದೃಢತೆ ಮತ್ತು ಪರೀಕ್ಷೆಯ ಮೂಲಕ ನಿರ್ಧರಿಸಿದ ಅವರ ಪಾಂಡಿತ್ಯ-ಇವೆರಡರ ಆಧಾರದಮೇಲೆ ಅಭ್ಯರ್ಥಿಗಳನ್ನೂ ಆರಿಸುವ ಈ ಪದ್ಧತಿ ಮುಂದಿನ ರಾಜಮನೆತನಗಳಿಗೂ ಅನುಕರಣ ಯೋಗ್ಯವಾಗಿ ಪರಿಣಮಿಸಿತು.

	ಪರೀಕ್ಷೆಯನ್ನು ಸರ್ಕಾರದ ಅಧಿಕಾರ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯಲು ಸಾಧನವನ್ನಾಗಿ ಮಾಡಿಕೊಂಡ ಹಾನ್ ರಾಜಮನೆತನದವರು ಕ್ರಿ.ಪೂ. ದಲ್ಲೆ ರಾಜಧಾನಿಯಲ್ಲಿ ಸರ್ಕಾರದ ಪರಿಷತ್ತನ್ನು (ಅಕೆಡಮಿ) ಆರಂಭಿಸಿದರು. ಸರ್ಕಾರ ಸೂಕ್ತವೆಂದು ಪರಿಗಣಿಸಿದ 3,000 ಮಂದಿ ವಿದ್ಯಾರ್ಥಿಗಳಿಗೆ ಅಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಅದಕ್ಕಾಗಿ ಅಲ್ಲಿ ಅನೇಕ ಪಂಡಿತರನ್ನು ನೇಮಿಸಲಾಗುತ್ತಿತ್ತು. ಕ್ರಮ ಕ್ರಮವಾಗಿ ಸಾಮ್ರಾಜ್ಯದ ಪ್ರತಿರಾಜ್ಯವೂ ಒಂದೆರಡು ವಿದ್ಯಾಲಯಗಳನ್ನು ಪಡೆದುಕೊಂಡವು. ಅಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸರ್ಕಾರ ಸ್ಥಾಪಿಸಿದ್ದ ರಾಜಧಾನಿಯ ಪರಿಷತ್ತಿಗೆ ಪರೀಕ್ಷೆಯೊಂದರ ಮೂಲಕ ಸೇರಲು ಅರ್ಹತೆ ಪಡೆಯಬೇಕಾಗಿತ್ತು. ಅಲ್ಲಿ ಶಿಕ್ಷಣ ಪಡೆದ ಅನಂತರ ಅವರಿಗೆ ಅಂತಿಮ ಪ್ರವೇಶ ಪರೀಕ್ಷೆಯೊಂದನ್ನು ನಡೆಸಿ ಅವರಿಗೆ ಕೊಡಬೇಕಾದ ಸರ್ಕಾರದ ಅಧಿಕಾರ ಸ್ಥಾನವನ್ನು ನಿರ್ಧರಿಸಲಾಗುತ್ತಿತ್ತು. ಪ್ರಾಂತೀಯ ಮತ್ತು ಸಾಮ್ರಾಜ್ಯ ಪರಿಷತ್ತು ಮತ್ತು ವಿದ್ಯಾಲಯಗಳಲ್ಲಿ ಮುಖ್ಯವಾಗಿ ಕಾನ್‍ಫ್ಯೂಷಸ್ ತತ್ತ್ವಪಂಥದ ಸಿದ್ಧಾಂತದ ಅಧ್ಯಯನ ನಡೆಯುತ್ತಿತ್ತು. ಅಂದಿಗಾಗಲೆ ಅದಕ್ಕೆ ಪ್ರತಿಸ್ಪರ್ಧಿಯಾಗಿ ನೈಯ್ಯಾಯಿಕಸಿದ್ಧಾಂತವೊಂದು ಪ್ರಚಾರಕ್ಕೆ ಬಂದಿದ್ದರೂ ಸಮ್ರಾಟರು ಕಾನ್‍ಫ್ಯೂಷಸ್ ಸಿದ್ಧಾಂತವನ್ನೇ ಅಧಿಕೃತ ತತ್ತ್ವದೃಷ್ಟಿಯಾಗಿ ಅಂಗೀಕರಿಸಿದ್ದರು. ಅವರು ಅಂದಿಗಂದಿಗೆ ಆ ಸಿದ್ಧಾಂತದ ಪಂಡಿತರ ಸಮ್ಮೇಳನಗಳನ್ನು ನಡೆಸಿ ಆ ತತ್ತ್ವ ಸಿದ್ಧಾಂತಗಳನ್ನು ಶುದ್ಧರೂಪದಲ್ಲಿ ನಿರ್ಧರಿಸಲು ಯತ್ನಿಸುತ್ತಿದ್ದರು. ಕ್ರಿ.ಶ. 175ರಲ್ಲಿ ಅಧಿಕೃತ ಸ್ವರೂಪದಲ್ಲಿ ಅದನ್ನು ಪ್ರಕಟಿಸಲಾಯಿತು. ಆ ತತ್ತ್ವವನ್ನು ಸಾಮ್ರಾಜ್ಯದ ಅಧಿಕೃತ ತತ್ತ್ವದೃಷ್ಟಿಯನ್ನಾಗಿ ಅಂಗಿಕರಿಸಿದ್ದರಿಂದ ರಾಷ್ಟ್ರದಲ್ಲಿ ಅಧಿಕಾರಸ್ಥಾನಗಳಿಗೆ ವಂಶ, ಜಾತಿ ಐಶ್ವರ್ಯ ಇವುಗಳಿಗೆ ಬದಲಾಗಿ ಪಾಂಡಿತ್ಯ ಮತ್ತು ನೈತಿಕ ಸಚ್ಚಾರಿತ್ರ್ಯಗಳನ್ನು ಆಧಾರ ಮಾಡಿಕೊಳ್ಳುವುದು ಆಚರಣೆಗೆ ಬಂತು. ಅಲ್ಲದೆ, ತಮ್ಮ ಮಂತ್ರಾಲೋಚನವರ್ಗದಲ್ಲೂ ಪಂಡಿತರಿಗೇ ಸ್ಥಾನವೀಯುತ್ತಿದ್ದರು. ಸಚ್ಚಾರಿತ್ರ್ಯ ಮತ್ತು ಪಾಂಡಿತ್ಯ ಎರಡು ಶಿಕ್ಷಣದಿಂದ ಲಭಿಸಬೇಕಾಗಿದ್ದುದರಿಂದ ಸಾಮ್ರಾಜ್ಯದ ಹಿತದೃಷ್ಟಿಯಲ್ಲಿ ಶಿಕ್ಷಣ ಪ್ರಸಾರಕ್ಕೆ ಸರ್ಕಾರ ಆದ್ಯತೆ ನೀಡುತ್ತ ಬಂತು. ಕಾನ್‍ಫ್ಯೂಷಸನ ತತ್ತ್ವ ಸಮ್ರಾಟರಿಗೆ ಪರಮ ಪವಿತ್ರ ಸ್ಥಾನವನ್ನೂ ಪರಮೋನ್ನತ ಅಧಿಕಾರವನ್ನೂ ನೀಡಿತ್ತು. ಇದರಿಂದ ಸಮ್ರಾಟರಿಗೆ ಸ್ವಾಭಾವಿಕವಾಗಿ ಆ ತತ್ತ್ವದೃಷ್ಟಿ ಪ್ರಿಯವೆನಿಸಿದ್ದರಲ್ಲಿ ಆಶ್ವರ್ಯವೇನಿಲ್ಲ.

	ಕ್ರಿ.ಶ. 25ರಲ್ಲಿ ಆರಂಭವಾಗಿ 220ರ ವರೆಗೂ ನಡೆದುಕೊಂಡು ಬಂದ, ಹಾನ್ ಸಮ್ರಾಟರ ಆನಂತರದ ಕಾಲದಲ್ಲಿ ಅಧಿಕಾರಸ್ಥಾನಕ್ಕೆ ಅಭ್ಯರ್ಥಿಗಳನ್ನು ಆರಿಸುವಾಗಿ ಪರೀಕ್ಷೆಯ ಬಳಕೆಯನ್ನು ಕ್ರಮಕ್ರಮವಾಗಿ ಕಡೆಗಣಿಸಲಾಯಿತು. ಹಾಗೂ ಆ ವಂಶದ ಕೊನೆಯ ಸಮ್ರಾಟರ ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿನ ಫಲವಾಗಿ ಲಂಚರುಷುವತ್ತುಗಳು ಹೆಚ್ಚಿಕೊಂಡು ಹಣಕೊಟ್ಟವರಿಗೆ ಅಧಿಕಾರ ಸ್ಥಾನವನ್ನು ಕೊಡುವ ಸಂಪ್ರದಾಯ ಬೆಳೆದು ಬಂತು. ಪರಿಷತ್ತುಗಳಲ್ಲಿ ಶಿಕ್ಷಣ ಪಡೆದವರು ಪರೀಕ್ಷೆಗಳ ಮೂಲಕ ಅಧಿಕಾರಸ್ಥಾನಕ್ಕೆ ಬರುವ ಅವಕಾಶ ಕಡಿಮೆಯಾಗಿ ಅಲ್ಲಿ ನೀಡುತ್ತಿದ್ದ ಶಿಕ್ಷಣಕ್ಕೆ ಮೊದಲಿದ್ದ ಗೌರವ ಇಲ್ಲವಾಯಿತು. ಕ್ರಿ.ಶ. 7ನೆಯ ಶತಮಾನದವರೆಗೆ ಪರೀಕ್ಷೆಯೂ ಅದರೊಡನೆ ಶಿಕ್ಷಣ ವ್ಯವಸ್ಥೆಯೂ ಹಿಂಬದಿಗೆ ಬಿದ್ದುವು.

	ಕ್ರಿ.ಶ. 589ರಲ್ಲಿ ಸಿಂಹಾಸನಕ್ಕೆ ಬಂದ ಸೂರ್ಯ ವಂಶದ ಸಮ್ರಾಟರು ಮತ್ತೆ ಪರೀಕ್ಷೆಗಳನ್ನೂ ಅದರೊಡನೆ ಪರಿಷತ್ತು ಮತ್ತು ವಿದ್ಯಾಲಯಗಳನ್ನೂ ಆರಂಭಿಸಿದರು. ಅವರ ಅನಂತರ 618ರಲ್ಲಿ ಅಧಿಕಾರಕ್ಕೆ ಬಂದ ತಾಂಗ್ ವಂಶದ ಸಮ್ರಾಟರ ಕಾಲದಲ್ಲೂ ಪರೀಕ್ಷೆ ಅಭ್ಯರ್ಥಿಗಳನ್ನು ಕೆಲಸಕ್ಕೆ ಆರಿಸಿಕೊಳ್ಳುವ ಪ್ರಧಾನ ಉಪಕರಣವಾಯಿತು. ಆ ವಂಶದ ಚಕ್ರವರ್ತಿನಿ ವೂಳ ಕಾಲದಲ್ಲಿ ಅದು ಇನ್ನು ಪ್ರಮುಖ ಸಾಧನವಾಗಿ ಪರಿಣಮಿಸಿತು. ಆಗ ತಾನೆ ಗಳಿಸಿದ್ದ ತನ್ನ ಅಧಿಕಾರವನ್ನು ಭದ್ರಗೊಳಿಸಿಕೊಳ್ಳಲು ಯತ್ನಿಸುವಾಗ ಹಳೆಯ ತನ್ನ ವಿರುದ್ಧ ಇದ್ದ ಅಧಿಕಾರಿಗಳನ್ನು ಬಡ್ತಿಕೊಟ್ಟು ಮೇಲ್ದರ್ಜೆಗೇರಿಸುವುದಾಗಲಿ ಶಿಫಾರಸುಗಳ ಮೂಲಕ ಆರಿಸಿಕೊಳ್ಳುವುದಾಗಲಿ ಅವಳಿಗೆ ಸರಿಬೀಳಲಿಲ್ಲ. ಪರೀಕ್ಷೆಯ ಮೂಲಕ ಆಯ್ದು ಹೊಸ ಜನರನ್ನು ಆರಿಸಿಕೊಳ್ಳುವುದರಿಂದ ತನ್ನ ಅಧಿಕಾರಕ್ಕೆ ಬೆಂಬಲವಾಗುವುದೆಂದು ಅವಳು ಪರೀಕ್ಷೆಗೆ ಮಹತ್ತ್ವ ನೀಡಿದಳು. ನೂತನ ಪದವೀಧರ ಅಧಿಕಾರಿಗಳು ತನಗೆ ಬೆಂಬಲವಿತ್ತು. ತನ್ನ ಅಧಿಕಾರವನ್ನು ಭದ್ರಗೊಳಿಸಿದ್ದನ್ನು ಕಂಡಂತೆ ಪರೀಕ್ಷೆಗೆ ಏಕಪ್ರಕಾರವಾಗಿ ಮಹತ್ತ್ವವಿತ್ತು ಆಕೆ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಅವಕಾಶ ಕಲ್ಪಿಸುತ್ತಾ ಹೋದಳು. ಅದುತನಕ ಪರೀಕ್ಷೆ ನಡೆಸುವ ಮತ್ತು ಅಧಿಕಾರಕ್ಕೆ ನೇಮಿಸಿಕೊಳ್ಳುವ ಕಾರ್ಯ ಹಳೆಯ ಅಧಿಕಾರಿಗಳನ್ನೊಳಗೊಂಡ ಮಂಡಲಿಯೊಂದಕ್ಕೆ ಸೇರಿತ್ತು. ಈಗ ಪರೀಕ್ಷೆ ನಡೆಸುವ ಮಂಡಲಿಯನ್ನು ಅಧಿಕಾರಕ್ಕೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಮಂಡಲಿಯಿಂದ ಪ್ರತ್ಯೇಕಿಸಲಾಯಿತು. ಆ ಮೂಲಕ ಪರೀಕ್ಷೆಯ ವ್ಯವಸ್ಥೆಗೆ ಒಂದು ಸ್ವತಂತ್ರ ಆಸ್ತಿತ್ವವೂ ಹೆಚ್ಚಿನ ಸ್ಥಾನಮಾನಗಳೂ ದೊರಕಿದುವು.

	10ನೆಯ ಶತಮಾನದ ಮಧ್ಯೆ ಅಧಿಕಾರಕ್ಕೆ ಬಂದ ಸೂಂಗ್ ವಂಶದ ಚಕ್ರವರ್ತಿಗಳು ಪರಿಷತ್ತುಗಳಿಗೆ ಶಿಕ್ಷಣಕ್ಕೆ ಆಯ್ದುಕೊಳ್ಳುವಾಗ ಅರ್ಹತಾಪತ್ರ, ಶಿಫಾರಸುಗಳನ್ನು ಆಧಾರಮಾಡಿಕೊಳ್ಳದೆ ಸಾಹಿತ್ಯದಲ್ಲಿ ಪರಿಶ್ರಮ ಹೊಂದಿರುವ ಯಾರುಬೇಕಾದರೂ ಅಲ್ಲಿನ ಪ್ರವೇಶ ಪರೀಕ್ಷೆಗೆ ಕೂಡಲು ಅವಕಾಶ ಕಲ್ಪಸಿದರು. ಅದರಲ್ಲಿ ಉತ್ತೀರ್ಣರಾದವರು ರಾಜಧಾನಿಯಲ್ಲಿ ನಡೆಯುತ್ತಿದ್ದ ಆಯ್ಕೆಯ ಪರೀಕ್ಷೆಗೆ ಕೂಡಬಹುದಾದ ಅವಕಾಶ ಕಲ್ಪಸಿತ್ತು. ಆ ಮೂಲಕ ಗ್ರಾಮಾಂತರದ ಬಡರೈತನ ಮಗನೂ ರಾಜ್ಯದ ಉನ್ನತಾಧಿಕಾರಕ್ಕೆ ಬರುವ ಅವಕಾಶವನ್ನು ಕಲ್ಪಸಿಕೊಟ್ಟರು. ಪ್ರಾಚೀನ ಚೀನದ ಶಿಕ್ಷಣದ ಇತಿಹಾಸದಲ್ಲಿ ಇದನ್ನು ಪ್ರಮುಖ ಘಟನೆಯೆಂದು ಪರಿಗಣಿಸಬಹುದು. ಏಕೆಂದರೆ ಎಲ್ಲರಿಗೂ ಅಧಿಕಾರಕ್ಕೆ ಬರುವ ಅವಕಾಶ ಕಲ್ಪನೆಯಾದಂತೆ ಸಾರ್ವತ್ರಿಕವಾಗಿ ಶಿಕ್ಷಣ, ಪ್ರಚಾರಕ್ಕೆ ಬರಲು ಅನುಕೂಲವಾಯಿತು. ಪರಿಷತ್ತಿನಲ್ಲಿ ಮತ್ತು ರಾಜಧಾನಿಯಲ್ಲಿ ನಡೆಯುವ ಪರೀಕ್ಷೆಗೆ ಕೂಡಲು ಸಿದ್ಧತೆ ಪಡೆಯಲು ದೇಶಾದ್ಯಂತ ಜನ ಆಶಿಸಿದರು. ಅದಕ್ಕಾಗಿ ಶಾಲೆಗಳು ಆರಂಭವಾದವು. ಅಲ್ಲದೆ ಪೂರ್ವ ಹಾಗೂ ಆಗ್ನೇಯ ಚೀನದ ಜನರೇ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಅಧಿಕಾರಸ್ಥಾನಗಳೆಲ್ಲ ಅವರಿಗೇ ಮೀಸಲಾಗಿ ಹೋಗುತ್ತಿದ್ದುವು ; ಅಲ್ಲಿನವರು ಅದಕ್ಕಾಗಿ ಹೆಚ್ಚಿನ ಶಿಕ್ಷಣವ್ಯವಸ್ಥೆಯನ್ನೂ ಮಾಡಿಕೊಂಡಿದ್ದರು. ಇತರ ಪ್ರದೇಶಗಳಲ್ಲಿ ಶಿಕ್ಷಣ ವ್ಯಾಪಕವಾಗಿ ಹರಡಿರಲಿಲ್ಲ. ರಾಜ್ಯದ ಆಡಳಿತ ಶಾಖೆಗಳಲ್ಲಿ ಒಂದೇ ಪ್ರದೇಶದವರು ಹೆಚ್ಚಿಕೊಂಡು ಸಾಮ್ರಾಜ್ಯದಲ್ಲಿ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದ್ದರು. ಈ ಪ್ರಾದೇಶಿಕ ಅಸಮಾನತೆಯನ್ನೂ ಅಗ್ನೇಯ ಏಷ್ಯದವರ ಸರ್ವಾಧಿಕಾರವನ್ನೂ ಮುರಿಯಲು ಸೂಂಗ್ ವಂಶದ ಸಮ್ರಾಟರು ಆಡಳಿತ ಸ್ಥಾನಗಳನ್ನು ಪ್ರಾದೇಶಿಕವಾಗಿ ಹಂಚಿಕೆಹಾಕಿ ಆಯಾ ಪ್ರದೇಶದವರಿಗೆ ಇಷ್ಟಿಷ್ಟೆಂದು ನಿಗದಿಮಾಡಿದರು. ಇದರಿಂದ ಸಾಮ್ರಾಜ್ಯದ ಎಲ್ಲ ಪ್ರದೇಶದವರಿಗೂ ಅಧಿಕಾರ ಸ್ಥಾನಕ್ಕೆ ಬರುವ ಅವಕಾಶ ಹೆಚ್ಚಿತು. ಅದರೊಡನೆ ಅಲ್ಲಿನ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಹೆಚ್ಚಲಾರಂಭಿಸಿ ಶಿಕ್ಷಣ ಸೌಲಭ್ಯದಲ್ಲಿ ಪ್ರಾದೇಶಿಕ ಸಮಾನತೆ ಏರ್ಪಡುತ್ತ ಬಂತು.

	ಮಧ್ಯಯುಗದಲ್ಲಿ ಶಿಕ್ಷಣ : 1368ರಲ್ಲಿ ಸಿಂಹಾಸನಕ್ಕೇರಿದ ಮಿಂಗ್ ಮತ್ತು ಚಿಂಗ್ ವಂಶದ ಸಮ್ರಾಟರು ಶಿಕ್ಷಣ ವ್ಯವಸ್ಥೆಗೆ ಹಿಂದಿನ ಪ್ರಾಮುಖ್ಯವನ್ನೇ ಮುಂದುವರಿಸಿಕೊಂಡು ಬಂದರು. ಅಲ್ಲದೆ ಅವರೂ ಮೂರು ವಿಶಿಷ್ಟ ಹಂತಗಳಲ್ಲಿ ಪರೀಕ್ಷೆ ನಡೆಸಿ ಮೂರು ಹಂತದಲ್ಲಿ ಪದವಿನೀಡುವ ಸಂಕೀರ್ಣ ವ್ಯವಸ್ಥೆಯನ್ನು ಮಾಡಿದರು. ಮೊದಲು ಪೂರ್ವಭಾವಿ ಪರೀಕ್ಷೆಯೊಂದನ್ನು ಆಯಾ ಅಭ್ಯರ್ಥಿಯ ಪ್ರದೇಶದಲ್ಲೇ ನಡೆಸಲಾಗುತ್ತಿತ್ತು. ಅದರಲ್ಲಿ ಉತ್ತೀರ್ಣರಾದವರು ಮೂರು ವರ್ಷಕ್ಕೆ ಎರಡಾವರ್ತಿ ನಡೆಸುತ್ತಿದ್ದ ಪ್ರಥಮ ಅಂತಸ್ತಿನ ಪದವಿಪರೀಕ್ಷೆಗೆ ಸಿದ್ಧರಾಗುತ್ತಿದ್ದರು. ಅದರಲ್ಲಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದುದಲ್ಲದೆ ಅನೇಕ ವಿಷಯಗಳಲ್ಲಿ ಪರೀಕ್ಷೆ ಕೊಡಬೇಕಾಗುತ್ತಿತ್ತು. ಸಹಸ್ರಗಟ್ಟಲೆ ವಿದ್ಯಾರ್ಥಿಗಳು ಆ ಪರೀಕ್ಷೆಗೆ ಕೂಡುತ್ತಿದ್ದರೂ ಕೇವಲ ಕೆಲವರು ಮಾತ್ರ ಉತ್ತೀರ್ಣರಾಗುತ್ತಿದ್ದರು. ಪ್ರಥಮ ಪದವಿ ಪಡೆದವರು ಮೂರು ವರ್ಷಕ್ಕೊಮ್ಮೆ ನಡೆಸುತ್ತಿದ್ದ ಎರಡನೆಯ ಹಂತದ ಪರೀಕ್ಷೆಗೆ ಕೂಡುತ್ತಿದ್ದರು. ಮೂರು ದಿನಗಳ ತನಕ ನಡೆಯುತ್ತಿದ್ದ ಈ ಪರೀಕ್ಷೆಗೂ ಸಹಸ್ರಾರು ಮಂದಿ ಕೂಡುತ್ತಿದ್ದರು. ಆದರೆ ಅವರಲ್ಲಿ ಕೇವಲ ಸ್ವಲ್ಪ ಮಂದಿ ಮಾತ್ರ ಉತ್ತೀರ್ಣರಾಗುತ್ತಿದ್ದರು. ಹಾಗೆ ಉತ್ತೀರ್ಣರಾದವರು ಮಾತ್ರ ಸಮ್ರಾಟರ ರಾಜಧಾನಿಯಲ್ಲಿ ನಡೆಯುತ್ತಿದ್ದ ಮೂರನೆಯ ಪದವಿಯ ಮತ್ತೊಂದು ಪರೀಕ್ಷೆಗೆ ಕೂಡಬೇಕಾಗಿತ್ತು. ಅದರಲ್ಲಿ ಉತ್ತೀರ್ಣರಾದವರನ್ನು ಸಮ್ರಾಟರೇ ಸ್ವತಃ ಪರೀಕ್ಷಿಸುತ್ತಿದ್ದರು. ಈ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಆಯ್ಕೆಯಾಗಿ ಸಾಮ್ರಾಜ್ಯದ ಘನ ಪಂಡಿತರೆನಿಸಿಕೊಳ್ಳುತ್ತಿದ್ದರಲ್ಲದೆ ಪ್ರಸಿದ್ಧ ಹ್ಯಾನ್‍ಲಿನ್ ವಿದ್ಯಾಪೀಠದಲ್ಲಿ ನೇಮಕವಾಗುತ್ತಿದ್ದರು.

	ಮಿಂಗ್ ಸಮ್ರಾಟರ ಕಾಲದಲ್ಲಿ ವ್ಯಾಸಂಗ ವಿಷಯಗಳೂ ಅವುಗಳ ವ್ಯವಸ್ಥೆಯೂ ಜಟಿಲವಾಗುತ್ತ ಬಂದುವು. ಜೂ ಷೀ ಪಂಡಿತ ಕಾನ್‍ಫ್ಯೂಷಸನ ತತ್ತ್ವಸಿದ್ಧಾಂತಗಳನ್ನು ಕುರಿತು ರಚಿಸಿದ ವ್ಯಾಖ್ಯಾನ ಹನ್ನೆರಡನೆಯ ಶತಮಾನದ ಕೊನೆಕೊನೆಗೆ ದೇಶಾದ್ಯಂತ ಪ್ರಚಾರಕ್ಕೆ ಬಂತು. ಅದನ್ನೇ ವಿದ್ಯಾಪೀಠಗಳಲ್ಲಿ ಅಂಗೀಕರಿಸಿದ್ದುವು. ಪರೀಕ್ಷೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಸ್ವೋಪಜ್ಞತೆಯನ್ನು ಪ್ರದರ್ಶಿಸಲು ಅವಕಾಶವಿರಲಿಲ್ಲ. ಆದ್ದರಿಂದ ಶಿಕ್ಷಣ ಸಂಸ್ಥೆಗಳೆಲ್ಲ ಜೂಷೀಯ ವ್ಯಾಖ್ಯಾನಗಳನ್ನು ಮಕ್ಕೀ ಕಮಕ್ಕಿ ಅಧ್ಯಯನ ಮಾಡುತ್ತಿದ್ದು ಜ್ಞಾನರಾಜ್ಯದ ಬೆಳೆವಣಿಗೆಗೆ ಅಗತ್ಯವಾದ ನಮ್ಯತೆ ಇಲ್ಲವಾಗುತ್ತಬಂತು. 1487ರಲ್ಲಿ 8 ಪಾದಗಳಲ್ಲಿ ಉತ್ತರಿಸುವ ಪ್ರಬಂಧ ಶೈಲಿಯನ್ನೂ ನಿಗದಿ ಮಾಡಿದರು. ಅದರಲ್ಲಿ ಇಷ್ಟೇ ಪದಗಳನ್ನೂ ಪದಪುಂಜಗಳನ್ನೂ ಬಳಸಬೇಕೆಂಬ ನಿಯಮವೂ ಆಚರಣೆಗೆ ಬಂದು ಪರೀಕ್ಷೆಯೂ ಅದಕ್ಕೆ ಸಿದ್ಧತೆ ನೀಡುತ್ತಿದ್ದ ವಿದ್ಯಾಪೀಠಗಳೂ ಒಂದು ಬಗೆಯ ಹಳೆಯ ಜ್ಞಾನದ ಕಸರತ್ತಿನ ಕೇಂದ್ರಗಳಾಗುತ್ತ ಬಂದುವು. ಇದನ್ನು ಅಲ್ಲಿನ ಜ್ಞಾನರಾಜ್ಯದ ಕುರುಡು(ಕತ್ತಲ) ಯುಗವೆಂದು ಕರೆಯಬಹುದು. ಶಿಕ್ಷಣ ಕ್ಷೇತ್ರದ ಈ ಪರಿಸ್ಥಿತಿ ಚಿಂಗ್ ವಂಶದ ಕೊನೆಕೊನೆಯ ವರೆಗೂ ಮುಂದುವರಿಯುತ್ತ ಹೋಯಿತು.

	ಶಿಕ್ಷಣ ವ್ಯವಸ್ಥೆ : ಪ್ರಾಚೀನ ಚೀನದಲ್ಲಿ ಶಿಕ್ಷಣ ಪರೀಕ್ಷೆಗಾಗಿಯೂ ಪರೀಕ್ಷೆ ಅಧಿಕಾರಸ್ಥಾನಗಳ ಗಳಿಕೆಗಾಗಿಯೂ ನಡೆಯುತ್ತ ಬಂದು ಪರೀಕ್ಷೆಗಳು ಶಿಕ್ಷಣದ ಹಾಗೂ ಶಿಕ್ಷಣ ಸಂಸ್ಥೆಗಳ ಸ್ವರೂಪವನ್ನು ನಿರ್ಧರಿಸುತ್ತ ಬಂದುದನ್ನು ಮೇಲಿನ ವಿವರಣೆಯಲ್ಲಿ ಕಾಣಬಹುದು. ಆಧುನಿಕ ಶಿಕ್ಷಣ ಮೀಮಾಂಸೆಯ ದೃಷ್ಟಿಯಲ್ಲಿ ಇದು ತೀರ ಹಾಸ್ಯಾಸ್ಪದವಾಗಿ ಕಾಣುವುದು ಸ್ಪಷ್ಟವಾಗಿದೆ. ಹೇಗೇ ಆಗಲಿ, ಅತಿ ಪ್ರಾಚೀನಕಾಲದಲ್ಲಿ ಅಲ್ಲಿ ಪರೀಕ್ಷೆಗಿದ್ದ ಪ್ರಾಮುಖ್ಯದ ಫಲವಾಗಿ ಶಿಕ್ಷಣ ಸಂಸ್ಥೆಗಳು ಪ್ರಚಾರಕ್ಕೆ ಬಂದುವು. ಹಾನ್ ವಂಶದ ಸಾಮ್ರಾಟನ ವಿದ್ಯಾಪೀಠಕ್ಕೆ ವಿದ್ಯಾರ್ಥಿಗಳು ಪ್ರಾದೇಶಿಕ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಬರುತ್ತಿದ್ದರು. ಆದರೆ ಈ ಪ್ರಾದೇಶಿಕ ವಿದ್ಯಾಸಂಸ್ಥೆಗಳು ಸಾರ್ವತ್ರಿಕವಾಗಿ ವ್ಯವಸ್ಥೆಗೊಂಡಿರಲಿಲ್ಲ. ಅವು ಬಹುಮಟ್ಟಿಗೆ ಪರೀಕ್ಷಾ ಸಂಸ್ಥೆಗಳಂತಿದ್ದುವು. ವಿದ್ಯಾರ್ಥಿಗಳು ವಿಧವಿಧವಾದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಅವುಗಳ ಪರೀಕ್ಷೆಗೆ ಕೂಡುತ್ತಿದ್ದರು. ಮುಂದೆ ಸೂಂಗ್-ಮಿಂಗ್ ವಂಶದ ಸಾಮ್ರಾಟರ ಕಾಲದಲ್ಲಿ ಅವಕ್ಕೆ ಬೋಧಿಸುವ ಕಾರ್ಯವನ್ನೂ ವಹಿಸಲಾಯಿತು. ಅವು ಕೇವಲ ಮುಖ್ಯಸ್ಥಳಗಳಲ್ಲಿರುತ್ತಿದ್ದುವು. ಪ್ರಾಚೀನ ಕಾಲದಿಂದಲೂ ವಿದ್ಯಾರ್ಥಿಗಳಿಗೆ ಮೂಲಶಿಕ್ಷಣವನ್ನು ನೀಡುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮುಖ್ಯಪಾತ್ರವಹಿಸುತ್ತಿದ್ದುವು. ಕೆಲವು ಶ್ರೀಮಂತರು ತಮ್ಮ ಕುಟುಂಬದವರಿಗಾಗಿ ಸಂಬಳದ ಮೇಲೆ ಅಧ್ಯಾಪಕರನ್ನು ನೇಮಿಸಿಕೊಂಡು ನಡೆಸುತ್ತಿದ್ದರು. ಅವು ದಕ್ಷತೆಯಿಂದ ಕೆಲಸ ಮಾಡುತ್ತಿದ್ದುವು ; ಪಕ್ಷಪಂಗಡಗಳೂ ತಮ್ಮ ಮಕ್ಕಳಿಗಾಗಿ ಶಾಲೆಗಳನ್ನು ಏರ್ಪಡಿಸಿಕೊಂಡಿದ್ದುವು. ಅವು ಅಷ್ಟು ದಕ್ಷತೆಯಿಂದ ಕೆಲಸ ಮಾಡುತ್ತಿರಲಿಲ್ಲ. ಮತ್ತೆ ಕೆಲವು ಊರೊಟ್ಟಿನ ಶಾಲೆಗಳಾಗಿದ್ದು ಅವು ತೀರ ಅಸಮರ್ಪಕವಾಗಿ ನಡೆಯುತ್ತಿದ್ದುವು. ಇವೆಲ್ಲ ಬಹುಮಟ್ಟಿಗೆ ಪ್ರಾಥಮಿಕ ಮಟ್ಟದ ಶಿಕ್ಷಣವನ್ನೊದಗಿಸುತ್ತಿದ್ದುವು. ಇವುಗಳಂತೆ ಪ್ರೌಢಶಾಲಾ ಮಟ್ಟದ ಖಾಗಿ ಶಿಕ್ಷಣ ಸಂಸ್ಥೆಗಳೂ (ಶೂಯ್ವಾನ್) ಅಸ್ತಿತ್ವದಲ್ಲಿದ್ದುವು. ಈ ಪ್ರೌಢವಿದ್ಯಾಸಂಸ್ಥೆಗಳು ಬೋಧಿಸುವುದರ ಜೊತೆಗೆ ಸಂಶೋಧನೆಗಳನ್ನೂ ನಡೆಸುತ್ತಿದ್ದವು. ಅಲ್ಲಿ ರಾಷ್ಟ್ರದ ಖ್ಯಾತ ಪಂಡಿತರು ಕೆಲಸ ಮಾಡುತ್ತಿದ್ದರು. ಸುಂಗ್ ಮತ್ತು ಚಿಂಗ್ ವಂಶದ ಸಾಮ್ರಾಟರ ಕಾಲದಲ್ಲಿ ಅವನ್ನು ಅರ್ಧ-ಸರ್ಕಾರಿ ಸಂಸ್ಥೆಗಳಾಗಿ ಮಾನ್ಯ ಮಾಡಲಾಯಿತು. ಚಿಂಗ್ ಅರಸುಗಳ ಕಾಲದಲ್ಲಿ ಪ್ರಾಂತೀಯ ಮುಖ್ಯಸ್ಥಳಗಳ ಪ್ರೌಢ ಶಿಕ್ಷಣ ಸಂಸ್ಥೆಗಳು ಆ ಪ್ರಾಂತ್ಯದಲ್ಲಿ ಕೀರ್ತಿವೆತ್ತ ಕೇಂದ್ರಗಳಾಗಿರುತ್ತಿದ್ದುವು. ಅಲ್ಲಿನ ವಿದ್ಯಾರ್ಥಿಗಳು ಪ್ರಾಂತೀಯ ಪರೀಕ್ಷೆಗಳಿಗೆ ಕೂಡಬಹುದಾಗಿತ್ತು. ಜಿಲ್ಲಾ ಮಟ್ಟದಲ್ಲೂ ಮುಖ್ಯಸ್ಥಳಗಳಲ್ಲಿ ಇಂಥ ಖಾಸಗಿ ಸಂಸ್ಥೆಗಳು ಅಸ್ತಿತ್ವದಲ್ಲಿದ್ದುವು.

	ಆಧುನಿಕ ಚೀನದಲ್ಲಿ ಶಿಕ್ಷಣ : ಇತರ ಪೌರಸ್ತ್ಯ ದೇಶಗಳಂತೆ ಚೀನದಲ್ಲೂ ಶಿಕ್ಷಣದ ಆಧುನಿಕ ಯುಗ ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾಯಿತು. ಪಾಶ್ಚಾತ್ಯರು ಅಲ್ಲಿಗೆ ಬರಲಾರಂಭಿಸಿದಾಗ ಅವರೊಡನೆ ಹೋರಾಡಬೇಕಾದ ಅನಿವಾರ್ಯವೊದಗಿದಾಗ ತಮ್ಮ ಶಿಕ್ಷಣ ಪದ್ಧತಿ ಆಧುನಿಕ ಜೀವನಕ್ಕೆ ಹೊಂದಿಕೊಳ್ಳದಿದ್ದ ಅಂಶ ವ್ಯಕ್ತವಾಗಿ ಹೋಯಿತು. ಕೇವಲ ಪರೀಕ್ಷೆಗಳೇ ಪ್ರಧಾನವಾಗಿದ್ದ ಶಿಕ್ಷಣ ಪದ್ಧತಿಯನ್ನು ಪುನವ್ರ್ಯವಸ್ಥೆಗೊಳಿಸಿ ಆಧುನಿಕ ಜೀವನಕ್ಕೆ ಹೊಂದಿಸಿಕೊಳ್ಳುವ ನಿರ್ದಿಷ್ಟ ಯತ್ನ ಆಗ ಆರಂಭವಾಯಿತು. ಈ ಯತ್ನದ ಫಲವಾಗಿ ಪಾಶ್ಚಾತ್ಯ ದೇಶಗಳಲ್ಲಿ ಆಗಲೇ ಪ್ರಚಾರಕ್ಕೆ ಬಂದಿದ್ದ ಶಿಕ್ಷಣ ವ್ಯವಸ್ಥೆಯ ನೂತನ ಅಂಶಗಳು ಅನುಷ್ಠಾನಕ್ಕೆ ಬರಹತ್ತಿದುವು. ಅದರೊಡನೆ ಅಲ್ಲಿನ ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯೂ ಮಾರ್ಪಡುತ್ತ ಬಂತು.

	ಚೀನದ ಆಧುನಿಕ ಶಿಕ್ಷಣದ ಇತಿಹಾಸದಲ್ಲಿ ಮೂರು ಮುಖ್ಯ ಘಟ್ಟಗಳನ್ನು ಕಾಣಬಹುದು. ಮೊದಲ ಘಟ್ಟ 1862ರಲ್ಲಿ ಆರಂಭವಾಗಿ ಹಿಂದಿನಿಂದ ನಡೆದುಕೊಂಡು ಬಂದಿದ್ದ ಶಿಕ್ಷಣಸಂಸ್ಥೆಗಳಲ್ಲಿ ಪಾಶ್ಚಾತ್ಯ ತಂತ್ರಗಳನ್ನು ಅನುಗೊಳಿಸುವ ಯತ್ನ ನಡೆಯಿತು. ಆದರೆ ತಮ್ಮದೇ ಆದ ವೈಶಿಷ್ಟ್ಯವನ್ನು ಎರಡು ಸಹಸ್ರ ವರ್ಷಗಳ ತನಕ ಉಳಿಸಿ ಬೆಳೆಸಿಕೊಂಡು ಬಂದಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಬದಲಾವಣೆಗಳನ್ನು ತರಲು ಇಚ್ಚಿಸದೆ ಮೂರು ನೂತನ ಮಾದರಿಯ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಭಾಷೆಯ ವ್ಯಾಸಂಗ, ತಾಂತ್ರಿಕ ಶಿಕ್ಷಣ, ಸೈನಿಕ ವಿದ್ಯಾಪೀಠಗಳು ಅಲ್ಲಲ್ಲಿ ಆರಂಭವಾದುವು. ಮಿಂಗ್ ವಂಶದ ಚಕ್ರವರ್ತಿಗಳ ಕಾಲದಿಂದ ಪ್ರಚಾರದಲ್ಲಿದ್ದ ಕಾನ್‍ಫ್ಯೂಷಸನ ನವೀಕೃತ ಸಿದ್ಧಾಂತಗಳ ಜೊತೆಗೆ ಪರೀಕ್ಷೆಯಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಸೇರಲು ಆರಂಭವಾಯಿತು. ಆದ್ದರಿಂದ ಅದರ ಬೋಧನೆಗೆ ಸಾಂಪ್ರದಾಯಿಕ ಮತ್ತು ನೂತನ ಶಾಲೆಗಳಲ್ಲಿ ಸ್ವಲ್ಪಮಟ್ಟಿನ ಅವಕಾಶ ಕಲ್ಪನೆಯಾಯಿತು. ಆದರೆ ಅದಷ್ಟರಿಂದ ಶಿಕ್ಷಣ ಆಧುನಿಕ ಜೀವನಕ್ಕೆ ಹೊಂದಿಕೊಳ್ಳಲಾಗಲಿಲ್ಲ. 1895ರಲ್ಲಿ ಜಪಾನ್ ಚೀನವನ್ನು ಸೋಲಿಸಿದಾಗ ಈ ಅಂಶ ಚೆನ್ನಾಗಿ ವ್ಯಕ್ತಪಟ್ಟಿತು. ತಮ್ಮ ಗತಕಾಲದ ಶಿಕ್ಷಣ ಪದ್ಧತಿಯನ್ನು ಅಲ್ಪಸ್ವಲ್ಪ ತೇಪೆಹಾಕಿ ನೇರಮಾಡುವುದು ಸಾಧ್ಯವಿಲ್ಲವೆಂಬುದು ಅರಿವಾಗಿಹೋಯಿತು. ಆಗ ಅಲ್ಲಿನ ತತ್ತ್ವಚಿಂತಕರೂ ಶಿಕ್ಷಣವೇತ್ತರೂ ತಮ್ಮ ಅರ್ಷೇಯ ಶಿಕ್ಷಣದ ರಚನೆಯನ್ನೂ ಅದರ ಗುರಿಯನ್ನೂ ಆಮೂಲಾಗ್ರವಾಗಿ ಬದಲಾಯಿಸಲು ನಿರ್ದಿಷ್ಟವಾಗಿ ಕಾರ್ಯನಿರತರಾದರು.

	ಚೀನೀ ಶಿಕ್ಷಣದ ಆಧುನೀಕರಣದ ಎರಡನೆಯ ಘಟ್ಟ ಈ ಶತಮಾನದ ಮೊದಲ ದಶಕದಲ್ಲಿ ಆರಂಭವಾಯಿತು. ಹಿಂದಿನಿಂದ ಬಂದಿದ್ದ ವಿದ್ಯಾಪೀಠಗಳನ್ನು ಸರ್ಕಾರ ಸಾರ್ವಜನಿಕ ಶಾಲೆಗಳನ್ನಾಗಿ ಪರಿವರ್ತಿಸಿತು. ಪ್ರಾಂತೀಯ ಮುಖ್ಯಸ್ಥಳಗಳಲ್ಲಿದ್ದ ಉನ್ನತ ವಿದ್ಯಾಪೀಠಗಳು ಕಾಲೇಜುಗಳಾದುವು. ಪ್ರತಿಪ್ರಾಂತ್ಯದ ಜಿಲ್ಲಾ ಕೇಂದ್ರಗಳಲ್ಲೂ ತಾಲ್ಲೂಕು ಕೇಂದ್ರಗಳಲ್ಲೂ ದೊಡ್ಡ ದೊಡ್ಡ ಗ್ರಾಮಗಳಲ್ಲೂ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳೂ ಆರಂಭವಾದುವು. ಅಲ್ಲಿ ಕೆಲವು ನೂತನ ವಿಷಯಗಳನ್ನು ಬೋಧಿಸಲು ಆರಂಭಿಸಿದ್ದರೂ ದೇಶೀಯ ಪದ್ಧತಿಯ ಶಿಕ್ಷಣ ಇನ್ನೂ ಪ್ರಧಾನವಾಗೇ ಇತ್ತು. ಈ ಸ್ಥಿತಿಗೆ ವಿರುದ್ಧವಾಗಿ ಅಲ್ಲಿಗೆ ವಲಸೆ ಬಂದಿದ್ದ ಕ್ರೈಸ್ತ ಪಾದ್ರಿಗಳು ಆರಂಭಿಸಿದ್ದ ಖಾಸಗಿ ಪಾಠಶಾಲೆಗಳು ತೀವ್ರವೇಗದಲ್ಲಿ ಆಧುನಿಕ ಪದ್ಧತಿಯನ್ನು 
ಅನುಸರಿಸತೊಡಗಿದುವು. ಅನೇಕರಿಗೆ ಅವುಗಳ ಶಿಕ್ಷಣ ಆಕರ್ಷಣೀಯವಾಗಿ ಕಂಡಿತು. ಇದರ ಫಲವಾಗಿ ಸರ್ಕಾರ 1905ರಲ್ಲಿ ಪರೀಕ್ಷಾ ಪ್ರಾಧಾನ್ಯದ ಶಿಕ್ಷಣ ಪದ್ಧತಿಯ ಲೋಪದೋಷಗಳನ್ನು ಮನಗಂಡು ಆ ಪರೀಕ್ಷಾ ಪದ್ಧತಿಯನ್ನೇ ಕೈ ಬಿಟ್ಟಿತು. ಅಂದಿಗಾಗಲೇ ಅನೇಕರು ಜಪಾನಿನಲ್ಲಿ ಶಿಕ್ಷಣ ಪಡೆದು ಮಾತೃಭೂಮಿಗೆ ಹಿಂದಿರುಗಿದ್ದರು. ಅವರೆಲ್ಲ ತಮ್ಮ ರಾಷ್ಟ್ರದ ಉಳಿವಿಗೂ ಅಭಿವೃದ್ಧಿಗೂ ಇಡೀ ಶಿಕ್ಷಣ ವ್ಯವಸ್ಥೆ ನವೀಕರಣವಾಗಬೇಕೆಂದು ಆಗ್ರಹದಿಂದ ಸೂಚಿಸತೊಡಗಿದರು.

	ಆ ಸುಮಾರಿಗಾಗಲೆ ಎಲ್ಲ ದೇಶಗಳಂತೆ ಚೀನದಲ್ಲೂ ನೂತನ ರಾಷ್ಟ್ರೀಯ ಭಾವನೆ ಹೊಸರೂಪವನ್ನು ತಾಳುತ್ತ ಬರುತ್ತಿತ್ತು. ಹೊಸದಾಗಿ ರೂಪುವೆತ್ತಿದ್ದ ಶಿಕ್ಷಣ ಪದ್ಧತಿಯನ್ನು ಸರ್ಕಾರ ಪೂರ್ಣವಾಗಿ ನಿಯಂತ್ರಿಸುತ್ತಿತ್ತು. ಅದಕ್ಕಾಗಿ ಶಿಕ್ಷಣ ಸಚಿವಾಲಯವೂ ಅಸ್ತಿತ್ವಕ್ಕೆ ಬಂದಿತ್ತು. ಜನಾಂಗವನ್ನು ಪುನರುಜ್ಜೀವನಗೊಳಿಸುವುದೂ ರಾಷ್ಟ್ರದ ಸೇನೆಯನ್ನು ಬಲಪಡಿಸುವುದೂ ಶಿಕ್ಷಣದ ಪ್ರಧಾನ ಉದ್ದೇಶಗಳೆಂದು ಸರ್ಕಾರ ಘೋಷಿಸಿತು. ಜಪಾನಿನಲ್ಲಿದ್ದಂತೆ ಶಾಲೆಗಳನ್ನು ಪುನವ್ರ್ಯವಸ್ಥೆಗೊಳಿಸಿ, ಅಲ್ಲಿ ವಿಜ್ಞಾನ ಮತ್ತು ಸೈನಿಕ ಶಿಕ್ಷಣಕ್ಕೆ ಪ್ರಾಶಸ್ತ್ಯವೀಯಲಾಯಿತು. ಶಿಕ್ಷಣ ರಾಷ್ಟ್ರವನ್ನು ಬಲಪಡಿಸುವುದಕ್ಕೆಂಬ ಭಾವನೆ ದೇಶಾದ್ಯಂತ ಹರಡಿತು. ಈ ಪ್ರವೃತ್ತಿ, ಸಹಸ್ರಾರುವರ್ಷಗಳಿಂದ ಬಂದಿದ್ದ ಸಾಮ್ರಾಟರ ಆಳ್ವಿಕೆಯನ್ನು ಕೊನೆಗಾಣಿಸಿ 1912ರಲ್ಲಿ ಗಣರಾಜ್ಯವನ್ನು ಸ್ಥಾಪಿಸಿದ ಮೇಲೂ ಮುಂದುವರಿಯುತ್ತಿತ್ತು. ಆದರೆ 1916ರಲ್ಲಿ ಗಣರಾಜ್ಯದ ಕೇಂದ್ರ ಸರ್ಕಾದ ಕುಸಿತದಿಂದ ಉದ್ಭವಿಸಿದ ಪ್ರಾಂತೀಯ ಮಹಾ ಸೇನಾನಿ ಪಾಳೆಯಗಾರರ ಆಳ್ವಿಕೆಯಲ್ಲಿ ಶಿಕ್ಷಣದ ರಾಷ್ಟ್ರೀಯ ಸೇನಾ ಶಕ್ತಿವರ್ಧನದ ಉದ್ದೇಶ ಹಿಂಬದಿಗೆ ಬಿತ್ತು. ಒಂದನೆಯ ಮಹಾಯುದ್ಧದಲ್ಲಿ ಪಾಶ್ಚಾತ್ಯ ಪೌರಪ್ರಭುತ್ವಗಳು ಗಳಿಸಿದ ಜಯದಿಂದ ಅಲ್ಲಿನ ಶಿಕ್ಷಣ ಪದ್ಧತಿಯು ವರಿಷ್ಠ ವರ್ಚಸ್ಸು ಚೀನದ ಶಿಕ್ಷಣ ಮೇಲೆ ಹೊಸ ಪ್ರಭಾವವನ್ನು ಬೀರಿತು. ಅಂದಿಗಾಗಲೇ ಅನೇಕರು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಶಿಕ್ಷಣ ಪಡೆದು ಹಿಂದಿರುಗಿದ್ದರು. ಅವರ ಮುಂದಾಳುತನದಲ್ಲಿ ಪಾಶ್ಚಾತ್ಯ ಮಾದರಿಯಲ್ಲಿ ಶಿಕ್ಷಣವನ್ನು ಪುನವ್ರ್ಯವಸ್ಥೆಗೊಳಿಸುವ ಕಾರ್ಯ ಮೊದಲಾಯಿತು. ಅಮೆರಿಕಾದಲ್ಲಿ ಪ್ರಚಾರಕ್ಕೆ ಬರುತ್ತಿದ್ದ 'ಪ್ರಗತಿಶೀಲ ಶಿಕ್ಷಣ'ದ ಪೌರ ಜೀವನ ಶಿಕ್ಷಣ ತತ್ತ್ವ ದೃಷ್ಟಿ ಅವರ ಕಾರ್ಯದಲ್ಲಿ ಮಾರ್ಗದರ್ಶನ ಮಾಡುತ್ತಿತ್ತು. ಜೊತೆಗೆ 1915ರಿಂದ ಆರಂಭವಾಗಿದ್ದ, ಜಪಾನಿನ ವಿರುದ್ಧ ಭಾವನೆಯ ಪರಿಣಾಮವಾಗಿ ತಮ್ಮೆಲ್ಲ ಪುನವ್ರ್ಯವಸ್ಥೆಯ ಕಾರ್ಯದಲ್ಲೂ ಜಪಾನಿನದನ್ನು ತಿರಸ್ಕರಿಸಿ ಅಮೆರಿಕದ್ದನ್ನು ಅಂಗೀಕರಿಸುವ ಮನೋಭಾವ ತೀವ್ರ ವೇಗದಲ್ಲಿ ಬೆಳೆಯಿತು. ಅದು ತನಕ ತಮ್ಮ ಶಿಕ್ಷಣದಲ್ಲಿ ಅನುಷ್ಠಾನಕ್ಕೆ ಬಂದಿದ್ದ ಜಪಾನಿನ ಅನುಕರಣವನ್ನು ಕಿತ್ತು ಹಾಕಿ ಅಮೆರಿಕವನ್ನು ಅನುಕರಿಸುವುದು ಆರಂಭವಾಯಿತು.

	ಕೇಂದ್ರದ ಅಧಿಕಾರ ಹಾಗೂ ಶಿಕ್ಷಣ ಸಚಿವಾಲಯದ ಹಿಡತ ಕುಂದುತ್ತ ಬಂದಂತೆ ಆಡಳಿತದಲ್ಲೂ ಶಿಕ್ಷಣ ಕ್ಷೇತ್ರದಲ್ಲೂ ಪೌರಪ್ರಭುತ್ವದ ತತ್ತ್ವಗಳನ್ನು ಆಚರಣೆಗೆ ತರಬೇಕೆಂದು ಪ್ರಮುಖ ತತ್ತ್ವಚಿಂತಕರೂ ಪ್ರಧಾನ ವಿದ್ಯಾಲಯಗಳೂ ಪ್ರತಿಪಾದಿಸಿದುವು. ಆ ಕಾರ್ಯ ಸಾಧಿಸಲು ಅವರು 1919ರ ಮೇ ನಾಲ್ಕರ ಚಳವಳಿಯನ್ನು ಆಶ್ರಯಿಸಿದರು. ಆ ಚಳಿವಳಿಗಾರರು ರಾಷ್ಟ್ರದಲ್ಲಿ ಹೆಸರಿಗೆ ಮಾತ್ರ ಗಣರಾಜ್ಯ ಅಸ್ತಿತ್ವಕ್ಕೆ ಬಂದಿದ್ದರೂ ಪೌರಪ್ರಭುತ್ವ ಆಚರಣೆಯಲ್ಲಿಲ್ಲದ್ದದ್ದಕ್ಕಾಗಿ ಆಗ್ರಹಗೊಂಡು ಅದನ್ನು ಅನುಷ್ಠಾನಕ್ಕೆ ತರಲು ಹೊರಟಿದ್ದರು. ಶಿಕ್ಷಣದಲ್ಲೂ ಲೋಕಸತ್ತೆಯ ತತ್ತ್ವನ್ನು ಆಚರಣೆಗೆ ತರುವುದು ಆ ಉದ್ದೇಶದಲ್ಲಿ ಅಂತರ್ಗತವಾಯಿತು. ರಾಷ್ಟ್ರದಲ್ಲಿ ಅಂಥ ನೂತನ ಸಂಸ್ಕøತಿಯೊಂದಕ್ಕೆ ಅಸ್ತಿಭಾರವನ್ನು ಹಾಕುವ ಅವರ ಯತ್ನ ಮಹಾಸೇನಾನಿಗಳ ಆಳ್ವಿಕೆಯಲ್ಲಿ ಯಶಸ್ಸು ಕಾಣದಂತಾಯಿತು. ಸೌಮ್ಯವಾದಿಗಳು ಶಿಕ್ಷಣವನ್ನು ರಾಜಕೀಯದಿಂದ ಪ್ರತ್ಯೇಕವಾಗಿಡಲು ಆಶಿಸಿದರು. ಜೊತೆಗೆ ಶಿಕ್ಷಣ ಸಂಸ್ಥೆಗಳು ಪರೀಕ್ಷೆಗಳಿದ್ದ ಕಾಲದಲ್ಲಿ ಹೊಂದಿದ್ದ ಅಧಿಕಾರವನ್ನು ಈಗ ಪಡೆದಿರಲಿಲ್ಲವಾಗಿ ತಮ್ಮ ಚಳವಳಿಯನ್ನು ಕಾರ್ಯರೂಪಕ್ಕಿಳಿಸಲು ಅವಕಾಶವಿಲ್ಲವಾಯಿತು. ಆದ್ದರಿಂದ ಉದ್ದೇಶಿಸಿದ ಪುನವ್ರ್ಯವಸ್ಥೆ ಕಾರ್ಯಗತವಾಗಿಲಿಲ್ಲ. ಆದರೂ ಇದ್ದ ಅವಕಾಶದಲ್ಲಿ ಹಲಕೆಲವು ಪ್ರಗತಿದಾಯಕ ಅಂಶಗಳು ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದುವು. ಮೇ ನಾಲ್ಕರ ಚಳವಳಿಯ ಅಂಗವಾದ ಸಾಹಿತ್ಯ ಸುಧಾರಣೆಯ ಹುರುಪಿನಿಂದ ಪ್ರೇರಿತವಾದ ಶಿಕ್ಷಣವೇತ್ತರು. ಪಠ್ಯಪುಸ್ತಕಗಳನ್ನು ಪ್ರಾದೇಶಿಕ ಮಾತೃಭಾಷೆಯಲ್ಲಿ ರಚಿಸಲಾರಂಭಿಸಿದರು. ಅದು ತನಕ, ವ್ಯವಹಾರಕ್ಕೆ ಅನುಪಯುಕ್ತವಾಗಿದ್ದ ಚೀನದ ಲಾಕ್ಷಣಿಕ ಭಾಷೆಯನ್ನು (ಗ್ರೀಕ್, ಲ್ಯಾಟಿನ್, ಸಂಸ್ಕøತಗಳಂಥ) ಶಿಕ್ಷಣರಂಗದಲ್ಲಿ ಬಳಸಬೇಕಾಗಿತ್ತು. ಲೋಕಸತ್ತೆಗೆ ಅದು ಉಚಿತವಲ್ಲವೆಂದು ಎಲ್ಲ ಪ್ರಾಂತೀಯ ಸರ್ಕಾರಗಳೂ ಅದರ ಸ್ಥಳದಲ್ಲಿ ಪ್ರಾಂತೀಯ ಮಾತೃಭಾಷೆಗಳನ್ನು ಪ್ರಚಾರಕ್ಕೆ ತಂದುವು. ಅಮೆರಿಕಾದಲ್ಲಿ ಶಿಕ್ಷಣ ಪಡೆದುಬಂದು ನ್ಯಾನ್‍ಕಿಂಗ್ ಮತ್ತು ಪೀಕಿಂಗ್ ಅಧ್ಯಾಪಕರ ಕಾಲೇಜುಗಳಲ್ಲಿ ವ್ಯಕ್ತಿನಿರತರಾಗಿದ್ದ ಶಿಕ್ಷಣವೇತ್ತರು ದೇಶಾದ್ಯಂತ ಶಿಕ್ಷಣದ ಪುನವ್ರ್ಯಸ್ಥೆಯ ಚಳವಳಿಗೆ ಅಗತ್ಯ ಪ್ರಚಾರವನ್ನು ಕೈಗೊಂಡರು. 1922ರಲ್ಲಿ ಸರ್ಕಾರ ಜಪಾನಿನ ಮಾದರಿಯನ್ನು ತಿರಸ್ಕರಿಸಿ, ಅಮೆರಿಕದ ಸಂಯುಕ್ತಸಂಸ್ಥಾನದ ಶಿಕ್ಷಣವನ್ನು ಅನುಕರಿಸಲು ಕಾನೂನು ಮಾಡಿತು.

	ರಾಷ್ಟ್ರದಲ್ಲಿ 1922ರಲ್ಲಿ ಕೇಂದ್ರಸರ್ಕಾರ ಅಸ್ತಿತ್ವಕ್ಕೆ ಬಂದಂತೆ ಶಿಕ್ಷಣದ ಆಧುನೀಕರಣ ಮೂರನೆಯ ಘಟ್ಟವನ್ನು ಮುಟ್ಟಿತು. 1927ರಲ್ಲಿ ಇಡೀ ರಾಷ್ಟ್ರವನ್ನು ಮತ್ತೆ ಒಟ್ಟುಗೂಡಿಸಿದ ಕ್ವೋಮಿನ್‍ಟಾಂಗ್ ಪಕ್ಷದ ಆಡಳಿತದಲ್ಲಿ ಶಿಕ್ಷಣಕ್ಕೂ ರಾಜಕೀಯಕ್ಕೂ ಮತ್ತೆ ಸಂಬಂಧ ಸ್ಥಾಪನೆಯಾಯಿತು. ಅದು ಆಡಳಿತಗಾರರನ್ನು ತನ್ನ ತತ್ತ್ವದೃಷ್ಠಿಯಲ್ಲಿ ಕೆಲಸಮಾಡುವಂತೆ ಮಾಡಿದ್ದಲ್ಲದೆ ಪಠ್ಯಪುಸ್ತಕಗಳಲ್ಲಿ ಹಾಗೂ ಪ್ರತಿಶಾಲೆಯಲ್ಲೂ ಸೂನ್-ಯಾತ್-ಸೆನ್‍ನ ಜನತಾತತ್ತ್ವ ತ್ರಯವನ್ನು ವ್ಯಾಸಂಗಮಾಡಬೇಕೆಂದು ಕಾನೂನು ಮಾಡಿ, ಇಡೀ ರಾಷ್ಟ್ರದ ಶಿಕ್ಷಣಕ್ಷೇತ್ರವನ್ನು ಪಕ್ಷದ ತತ್ತ್ವದೃಷ್ಟಿಯಲ್ಲಿ ಸುಧಾರಣೆಗೊಳಪಡಿಸಲು ಯತ್ನಿಸಿತು. ಆದರೆ ಅಂದಿಗಾಗಲೆ ಬಲಿಷ್ಠವೆನಿಸಿದ್ದ ಶಿಕ್ಷಣ ಸಚಿವಶಾಖೆ ಮತ್ತು ಸಾಂಪ್ರದಾಯಿಕ ಶಿಕ್ಷಣವನ್ನು ಪ್ರತಿಪಾದಿಸತೊಡಗಿತು. ಅದರಿಂದ ಜುಗುಪ್ಸೆಗೊಂಡ ಉದಾರವಾದಿಗಳನೇಕರು ತಮ್ಮ ದೃಷ್ಟಿಪಥಕ್ಕೆ ಅಂಟಿಕೊಂಡಿದ್ದು ರಾಜಕೀಯವಾಗಿ ಹಿಂದುಳಿದರು. ಮಿಕ್ಕವರು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ತಮ್ಮ ನೂತನ ಭಾವನೆಗಳನ್ನು ಅಲ್ಲಿನ ಶಾಲೆಗಳಲ್ಲಿ ಪ್ರಯೋಗಿಸತೊಡಗಿದರು.

	ಈ ಶತಮಾನದ ಮೂರನೆಯ ದಶಕದಲ್ಲಿ ಅಲ್ಲಿನ ಶಿಕ್ಷಣ ಗಣನೀಯ ಪ್ರಗತಿಯನ್ನೇನೊ ಸಾಧಿಸಿತು. ರಾಷ್ಟ್ರದಲ್ಲಿ ಸ್ಥಿರವಾದ ಸರ್ಕಾರ ಏರ್ಪಟ್ಟಿದ್ದುದರಿಂದ ರಾಷ್ಟ್ರಾದ್ಯಂತ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಿ ಶಿಕ್ಷಣದ ಸೌಲಭ್ಯವನ್ನು ವಿಸ್ತರಿಸುವುದೂ ಬೋಧನೆಯ ಮಟ್ಟವನ್ನು ಉತ್ತಮಪಡಿಸುವುದೂ ಸಾಧ್ಯವಾಯಿತು. ವಿಶ್ವವಿದ್ಯಾಲಯಗಳ ಶಿಕ್ಷಣ ಸೌಲಭ್ಯವೂ ದೇಶಾದ್ಯಂತ ವ್ಯವಸ್ಥೆಗೊಂಡಿತು. ಆದರೆ 1937ರಲ್ಲಿ ಜಪಾನಿನ ದಾಳಿಯಿಂದಾಗಿ ಕ್ವೋಮಿನ್ ಟಾಂಗ್ ಪಕ್ಷದ ಆಡಳಿತ ಒಳನಾಡಿನ ಪ್ರಾಂತ್ಯಗಳಿಗೆ ಸೀಮಿತವಾಯಿತು. ಜಪಾನಿನ 8 ವರ್ಷಗಳ ಆಕ್ರಮಣಕಾಲದಲ್ಲಿ ಅನೇಕ ವಿಶ್ವವಿದ್ಯಾಲಯಗಳು ಮುಚ್ಚಿಹೋದುವು. ಕೆಲವು ಸ್ಥಳಾಂತರವಾದುವು. ಒಟ್ಟಿನಲ್ಲಿ 1922ರಿಂದ ಆರಂಭವಾಗಿದ್ದ ಶಿಕ್ಷಣದ ಪ್ರಗತಿಗೆ ಅಡ್ಡಿಯುಂಟಾಯಿತು. 8 ವರ್ಷಗಳ ಅನಂತರ ಜಪಾನರ ದಾಳಿಯಿಂದ ಮುಕ್ತವಾದ ದೇಶ ಮತ್ತೆ ಅಂತರ್ಯುದ್ಧದ ಬೀಡಾಯಿತು.

	ಕಮ್ಯೂನಿಸ್ಟ್ ಚೀನದಲ್ಲಿ ಶಿಕ್ಷಣ : ಮಹಾಯುದ್ಧಕ್ಕೆ ಮುಂಚೆ ಆಚರಣೆಗೆ ಬಂದಿದ್ದ ಸುಧಾರಣೆಗಳು ಕಮ್ಯುನಿಸ್ಟರ ರಾಜಕೀಯ ದೃಷ್ಟಿಗೆ ಹಿಡಿಸಲಿಲ್ಲ. 1949ರಲ್ಲಿ ಅಧಿಕಾರಕ್ಕೆ ಬಂದ ಕಮ್ಯುನಿಸ್ಟ್ ಸರ್ಕಾರ ಆ ಸುಧಾರಣೆಗಳನ್ನೆಲ್ಲ ಮೊಟಕುಮಾಡಿ ಶಿಕ್ಷಣವನ್ನು ತನ್ನ ಪೂರ್ಣ ಹತೋಟಿಗೆ ತೆಗೆದುಕೊಂಡಿತು. ಹಿಂದೂ ಸಾಂಪ್ರದಾಯಿಕ ಶಿಕ್ಷಣದಲ್ಲಿ ರಾಜಕೀಯ ಶಿಕ್ಷಣವನ್ನು ಗಂಟುಹಾಕಿದ್ದ ಸಂಬಂಧವನ್ನು ಮತ್ತೆ ಎತ್ತಿಹಿಡಿಯಿತು. ಆದರೆ ಅದರ ಉದ್ದೇಶವೇನೋ ಬೇರೆಯಾಗಿತ್ತು. ಅದು ಅವರ ರಾಜಕೀಯ ದೃಷ್ಟಿಗೆ ಅನುಗುಣವಾಗಿದ್ದು. ಆ ಮೂಲ ಉದ್ದೇಶವನ್ನು ಘೋಷಿಸುವಂತಿರಬೇಕೆಂಬುದು ಕಮ್ಯುನಿಸ್ಟರ ತತ್ತ್ವ. ಈ ತತ್ತ್ವ ಅಂದಿಗಂದಿಗೆ ತೀವ್ರತೆಯಲ್ಲಿ ಏರಿಳಿತಗಳನ್ನು ವ್ಯಕ್ತಪಡಿಸಿದ್ದರೂ ಇಂದಿಗೂ ಚೀನದಲ್ಲಿ ಅನುಷ್ಠಾನದಲ್ಲಿದೆ. ಬಂಡವಾಳಶಾಹಿ ಪಂಥ ಶಿಕ್ಷಣದಲ್ಲಿ ಊಳಿಗಮಾನ್ಯಪದ್ಧತಿಯನ್ನೂ ವಸಾಹತು ಪದ್ಧತಿಯನ್ನೂ ಎತ್ತಿಹಿಡಿದಿತ್ತೆಂದು ಅದನ್ನು ಖಂಡಿಸಿ ತಮ್ಮ ರಾಜಕೀಯಕ್ಕೆ ಪೋಷಕವಾಗಿರವಂತೆ ಅದನ್ನು ಪುನಾರಚಿಸಲು ಮೊದಲುಮಾಡಿತು. ದೇಶಾದ್ಯಂತ ಪ್ರಚಾರದಲ್ಲಿದ್ದ ಕ್ರೈಸ್ತ ಪಾದ್ರಿಗಳ ಪಾಠಶಾಲೆಗಳನ್ನು ತೊಡೆದು ಹಾಕಿ ಸರ್ಕಾರ ತನ್ನ ಶಾಲೆಗಳನ್ನು ಆರಂಭಿಸಿತು.

	ಕೇಂದ್ರ ಕಮ್ಯುನಿಸ್ಟ್ ಪಕ್ಷ ಶಿಕ್ಷಣದ ನೀತಿಯನ್ನು ನಿರ್ಧರಿಸುತ್ತದೆ. ಆ ನೀತಿಗೆ ಅಧ್ಯಕ್ಷ ಮಾವೊ ಧೋರಣೆ ಆಧಾರವಾಗಿರುತ್ತದೆ. 1957ರ ಫೆಬ್ರುವರಿ 27ರ ದಿನ ಅವನು ಪ್ರತಿಯೊಬ್ಬನಿಗೂ ನೈತಿಕ, ಬೌದ್ಧಿಕ ದೈಹಿಕವಾಗಿ ಅಭಿವೃದ್ದಿ ಹೊಂದುವ ಸೌಲಭ್ಯವಿದ್ದು ಅವರೆಲ್ಲ ಸುಸಂಸ್ಕøತ ಸಮಾಜವಾದಿ ಕಾರ್ಯಕರ್ತರಾಗುವಂತೆ ಮಾಡುವುದು ದೇಶದ ಶಿಕ್ಷಣನೀತಿಯಾಗಿರಬೇಕೆಂದು ಸೂಚಿಸಿದರು. ಕಮ್ಯುನಿಸ್ಟ್ ಚೀನ ಕಾರ್ಮಿಕರ ರಾಜ್ಯವಾದ್ದರಿಂದ ಅಲ್ಲಿನ ಕಾರ್ಮಿಕವರ್ಗದ ಸೇವೆಗಾಗಿ ಶಿಕ್ಷಣ ಎಂದು ನಿರ್ದೇಶಿಸಿ, ಅದು ವರ್ಗಕಲಹ ಮತ್ತು ಉತ್ಪನ್ನಗಳಿಗೆ ಸಂಬಂಧಿಸಿದ ಜ್ಞಾನ ನೀಡಬೇಕೆಂದೂ ದ್ವಂದ್ವಾತ್ಮಕ ಭೌತಿಕವಾದ ಅವರ ಆಲೋಚನೆಯ ಶಕ್ತಿಯನ್ನು ಹೆಚ್ಚಿಸುವುದೆಂದೂ ಶಿಕ್ಷಣನೀತಿಗೆ ಸ್ಥೂಲವಾದ ಮಾರ್ಗದರ್ಶನ ಮಾಡಿದ್ದಾನೆ. ಪಕ್ಷ ನಿರ್ಧರಿಸುವ ನೀತಿಗನುಗುಣವಾಗಿ ಶಿಕ್ಷಣ ಸಚಿವರು ಅದನ್ನು ವ್ಯವಸ್ಥೆಗೊಳಿಸಿ ಆಡಳಿತ ನಡೆಸುತ್ತಾರೆ. 1957-58ರಲ್ಲಿ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತರುವಾಗ ಶಿಕ್ಷಣ ಮತ್ತು ಬೌದ್ಧಿಕ ಜೀವನದಲ್ಲಿ ಶ್ರೀಮಂತ ಪ್ರವೃತ್ತಿಗಳನ್ನು ತೊಡೆದುಹಾಕಲು ಪಠ್ಯಪುಸ್ತಕಗಳ ಮೂಲಕ ಮತಾಂತರ ಪ್ರಚಾರ (ಪ್ರೊಪಗ್ಯಾಂಡ) ಕೈಕೊಳ್ಳಲಾಯಿತು. ಇಂದಿಗೂ ಅದು ಇಡೀ ಶಿಕ್ಷಣದ ವ್ಯವಸ್ಥೆಯಲ್ಲಿ ಮುಂದುವರಿಯುತ್ತ ರಾಜಕೀಯಕ್ಕೆ ಶಿಕ್ಷಣ ಅಡಿಯಾಳಾಗಿ ಸೇವೆ ಸಲ್ಲಿಸುತ್ತ ಬರುತ್ತಿದೆ. 1958ರ ಅನಂತರ ವಿದ್ಯಾರ್ಥಿಗಳಂತೆ ಅಧ್ಯಾಪಕರು ಉತ್ಪನ್ನಕಾರ್ಯದಲ್ಲಿ ತೊಡಗುವುದು ಅಗತ್ಯವೆಂದೂ ಅದಿಲ್ಲದಿದ್ದರೆ ಶಿಕ್ಷಣಕ್ಕೆ ವಾಸ್ತವಿಕ ಸ್ವರೂಪ ಬರುವುದಿಲ್ಲವೆಂದೂ ನಿಗದಿಮಾಡಿದೆ. ಶಿಕ್ಷಣವನ್ನು ಕಮ್ಯೂನುಗಳಿಗೆ ವಹಿಸಿರುವ ಮುಖ್ಯ ಉದ್ದೇಶವೇ ಇದು. 1953ರಲ್ಲಿ ಅನುಷ್ಠಾನಕ್ಕೆ ಬಂದ ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ಸಾರ್ವತ್ರಿಕ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಕಾರ್ಯಕ್ಕೆ ಆದ್ಯತೆ ದೊರಕಿತು. ಶಾಲೆಗಳ ಸಂಖ್ಯೆ ಬಹುಬೇಗ ಹೆಚ್ಚಿತಲ್ಲದೆ. ಅಲ್ಲಿ ಮಕ್ಕಳ ಸಂಖ್ಯೆಯೂ ಆಗಾಧವಾಗಿ ಹೆಚ್ಚಿತು. ರಾಷ್ಟ್ರದಲ್ಲಿ ಹಿಂದಿನ ಆರಾಜಕತೆಯ ಫಲವಾಗಿ ಹೆಚ್ಚಿಕೊಂಡಿದ್ದ ನಿರಕ್ಷರಸ್ಥರ ಸಂಖ್ಯೆಯನ್ನು ಕಡಿಮೆಮಾಡಲು ಭಾಗಶಃ ಕಾಲದ ಮತ್ತು ಅಂಚೆ ಶಿಕ್ಷಣದ ಸೌಲಭ್ಯಗಳೂ ಆಚರಣೆಗೆ ಬಂದುವು. ರಾಷ್ಟ್ರದಲ್ಲಿ ಶಿಕ್ಷಣಕ್ಕೂ ರಾಜಕೀಯಕ್ಕೂ ಆರಂಭವಾಗಿದ್ದ ಬಾಂಧವ್ಯ ಜನತೆಯಲ್ಲಿ ನೂತನ ಆಸಕ್ತಿಯನ್ನು ಮೂಡಿಸಿ ಶಿಕ್ಷಣ ಸೌಲಭ್ಯಕ್ಕಾಗಿ ದೇಶಾದ್ಯಂತ ಬೇಡಿಕೆ ಹೆಚ್ಚತೊಡಗಿತು. ಆ ಬೇಡಿಕೆಯನ್ನು ಪೂರೈಸಲು ಸರ್ಕಾರ ಎಷ್ಟು ಶಾಲೆಗಳನ್ನು ಆರಂಭಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಆಗತಾನೆ ಅಸ್ತಿತ್ವಕ್ಕೆ ಬಂದಿದ್ದ ಕಾರ್ಖಾನೆಗೂ ಕಮ್ಯೂನುಗಳೂ ಆ ಕಾರ್ಯವನ್ನು ಕೈಗೊಳ್ಳಬೇಕಾಗಿ ಪಕ್ಷ ಉತ್ತೇಜನವಿತ್ತಿತು. ಅದರ ಫಲವಾಗಿ ಹೊಸ ಮಾದರಿಯ ನೂತನ ಶಿಕ್ಷಣ ಸಂಸ್ಥೆಗಳ ಉದಯಕ್ಕೆ ಅವಕಾಶವಾಯಿತು. ಸರ್ಕಾರದ ಹಣದ ಬೆಂಬಲವಲ್ಲದೆ ಆ ಕಮ್ಯೂನುಗಳೂ ಕಾರ್ಖಾನೆಗಳೂ ಆ ಶಾಲೆಗಳನ್ನು ತಮ್ಮ ಸ್ವಂತ ವೆಚ್ಚದಿಂದ ಆರಂಭಿಸಿ ನಡೆಸುತ್ತಿದ್ದುವು. ಇದು ಇಂದಿಗೂ ಮುಂದುವರಿಯುತ್ತಿದೆ.

	ಕಮ್ಯುನಿಸ್ಟರು ರಾಜ್ಯದಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸುವಾಗ ರಷ್ಯದ ಮೇಲ್ಪಂಕ್ತಿಯೂ ಸಹಾಯವೂ ದೊರಕಿದಂತೆ ಅಲ್ಲಿನ ಶಿಕ್ಷಣವನ್ನು ಪುನವ್ರ್ಯವಸ್ಥೆಗೊಳಿಸುವುದಕ್ಕೂ ರಷ್ಯದಲ್ಲಿ ಆಗಲೆ ಅಸ್ತಿತ್ವದಲ್ಲಿದ್ದ ಶಿಕ್ಷಣಪದ್ಧತಿ ಮೇಲ್ಪಂಕ್ತಿಯಾಯಿತು. ಸಮಾಜವಾದಿ ರಾಷ್ಟ್ರಗಳಲ್ಲಿ ಹಿರಿಯ ರಾಷ್ಟ್ರವೆನಿಸಿದ್ದ ರಷ್ಯದ ಶಿಕ್ಷಣವೇತ್ತರು ಚೀನಕ್ಕೆ ಆಗಮಿಸಿ ಇಲ್ಲಿನ ಶಿಕ್ಷಣದ ಪುನವ್ರ್ಯವಸ್ಥೆಗೆ ನೆರವು ನೀಡುತ್ತಿದ್ದರು. ಅನೇಕರು ರಷ್ಯಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆದು ಬರುತ್ತಿದ್ದರು. ಕಮ್ಯುನಿಸ್ಟ್ ಶಿಕ್ಷಣ ದೃಷ್ಟಿಯನ್ನು ಅರಿತು ಅರಗಿಸಿಕೊಂಡು ತಮ್ಮ ದೇಶಕ್ಕೆ ಬಂದು ಅಲ್ಲೂ ಅದನ್ನು ಆಚರಣೆಗೆ ತರಲು ಯತ್ನಿಸುತ್ತಿದ್ದರು. ರಷ್ಯದ ವಿಜ್ಞಾನಿಗಳು ತಂತ್ರಜ್ಞರೂ ಚೀನದ ಆಧುನಿಕ ಉದ್ಯೋಗಳಿಗೆ ನೆರವಾಗುವಂತೆ ವೈಜ್ಞಾನಿಕ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅಧ್ಯಾಪರಾಗಿ, ವಿಶೇಷ ಸಲಹೆಗಾರರಾಗಿ ಕೆಲಸಮಾಡುತ್ತಿದ್ದರು. ಕ್ರೋಮಿನ್ ಟಾಂಗ್ ಪಕ್ಷದ ನೇತೃತ್ವದಲ್ಲಿ ಪ್ರಚಾರಕ್ಕೆ ಬಂದಿದ್ದ ಡ್ಯೂಯಿ ತತ್ತ್ವ ದೃಷ್ಟಿಯನ್ನೂ ಅಮೆರಿಕದ ಶಿಕ್ಷಣಪದ್ಧತಿಯ ಪ್ರಭಾವವನ್ನೂ ತೊಡೆದುಹಾಕಿ ನಿಜವಾದ ಸಮಾಜವಾದಿ ತತ್ತ್ವದೃಷ್ಟಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಸ್ಥಾಪಿಸುವ ಕಾರ್ಯದಲ್ಲಿ ರಷ್ಯದ ಪ್ರಭಾವ ಪರಿಣಾಮಕಾರಿಯಾಗಿ ಕೆಲಸಮಾಡಿತು. ದೇಶದಲ್ಲಿ ಡ್ಯೂಯಿಯ ಹಾಗೂ ಅಮೆರಿಕದ ಶಿಕ್ಷಣಪದ್ಧತಿಯ ಅನುಯಾಯಿಗಳನ್ನು ಮೂಲೆಗೊತ್ತಲು ಆ ಮುಖವಾಗಿ ರಚನೆಯಾಗಿದ್ದ ಗ್ರಂಥಗಳನ್ನೂ ಲೇಖನ, ವರದಿ, ಯೋಜನೆ ಮುಂತಾದವನ್ನೂ ಬಹಿಷ್ಕರಿಸುವುದು ಭರದಿಂದ ಸಾಗುತ್ತ ಬಂತು.

	ಕಮ್ಯೂನಿಸ್ಟ್ ಶಿಕ್ಷಣ, ಉತ್ಪನ್ನವನ್ನು ಶಿಕ್ಷಣದೊಡನೆ ಸಂಬಂಧಿಸಿ ಹೊಸ ಮನ್ವಂತರವೊಂದನ್ನು ಅರಂಭಿಸಿತು. ಇದು ಪಕ್ಷದ ಅಧ್ಯಕ್ಷನೂ ನಿರ್ದೇಶಕನೂ ಆದ ಮಾವೊ ಸಿದ್ಧಾಂತಕ್ಕೆ ಅನುಗುಣವಾಗಿದ್ದು, ತತ್ತ್ವಕ್ಕೂ ಅನುಷ್ಠಾನಕ್ಕೂ ಸಂಬಂಧವಿರಬೇಕೆಂಬ ಅವನ ದೃಷ್ಟಿಯನ್ನು ಕಾರ್ಯರೂಪಕ್ಕಿಳಿಸಲು ಸಾಧ್ಯವಾಗಿತ್ತು. ಜೊತೆಗೆ ಶಿಕ್ಷಣದಿಂದ ಕೇವಲ ಬುದ್ಧಿಜೀವಿಗಳನ್ನೇ ಸೃಷ್ಟಿಸಿ ಅವರದೇ ಒಂದು ಉನ್ನತ ಸಮಾಜವನ್ನು ರೂಪಿಸುವ ಅಹಿತ ಪ್ರಸಂಗವೂ ತಪ್ಪುವಂತಾಗಿತ್ತು. ಶಿಕ್ಷಣದೊಡನೆ ಉತ್ಪನ್ನವನ್ನು ಸಂಬಂಧಿಸಿದ್ದರ ಫಲವಾಗಿ ವಿದ್ಯಾರ್ಥಿಗಳೂ ಸಮಾಜದ ಉಪಯುಕ್ತ ಪ್ರಜೆಗಳಾಗಿದ್ದು ಅದರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯದಲ್ಲಿ ಭಾಗಿಯಾಗಲು ಅವಕಾಶವಾಯಿತು. ಪ್ರೌಢಶಾಲೆಗಳಲ್ಲೂ ಕಾಲೇಜುಗಳಲ್ಲೂ 'ಅರ್ಧಕಾಲ ವ್ಯಾಸಂಗ-ಅರ್ಧಕಾಲ ಕೆಲಸದ ತತ್ತ್ವವನ್ನು ಆಚರಣೆಗೆ ತಂದಂತೆ ಮೇಲಿನ ಉದ್ದೇಶ ಹೆಚ್ಚು ಸಮರ್ಪಕವಾಗಿ ಈಡೇರುವಂತಾಯಿತು. ಇದರಿಂದ ಸಮಾಜದಲ್ಲಿದ್ದ ಅನಕ್ಷರತೆಯನ್ನು ಕಡಿಮೆ ಮಾಡಲೂ ಸಹಾಯವಾಯಿತು. ವಿದ್ಯಾರ್ಥಿಗಳು ಕಾರ್ಖಾನೆ ಮತ್ತು ಹೊಲಗದ್ದೆಗಳಲ್ಲಿ ಕೆಲಸದಲ್ಲಿ ತೊಡಗಿದಾಗ ಅಲ್ಲಿನ ಕಾರ್ಮಿಕರಿಗೆ ಬಿಡುವು ದೊರೆತು ಅಕ್ಷರಾಭ್ಯಾಸ, ಓದುಗಾರಿಕೆ ಅಥವಾ ಮುಂದುವರಿದ ಶಿಕ್ಷಣ ಇತ್ಯಾದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಾಯಿತು. ಜೊತೆಗೆ ಬುದ್ಧಿಜೀವಿಗಳಿಗೂ ಶ್ರಮಜೀವಿಗಳಿಗೂ ಇದ್ದ ಅಂತರವನ್ನು ಕೊನೆಗಾಣಿಸಲೂ ಈ ವಿಧಾನ ಅವಕಾಶ ಕಲ್ಪಿಸಿತು.

	ಶಿಕ್ಷಣವನ್ನು ಉತ್ಪನ್ನದೊಡನೆ ಸಂಬಂಧಿಸಿದ್ದರ ಫಲವಾಗಿ ಶಿಕ್ಷಣದ ಮಟ್ಟ ಸ್ವಾಭಾವಿಕವಾಗಿ ಕುಸಿದುಹೋಯಿತು. ಜೊತೆಗೆ ಮಾವೊ ತತ್ತ್ವದಂತೆ, ಶಿಕ್ಷಣ ಹಾಗೂ ತಾಂತ್ರಿಕ ಜ್ಞಾನಕ್ಕಿಂತ ರಾಜಕೀಯ ಪ್ರಜ್ಞೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂಬ ತತ್ತ್ವವನ್ನು ಜೊತೆಯಲ್ಲೇ ಆಚರಣೆಗೆ ತರುವ ಯತ್ನವೂ ನಡೆದು ವಿದ್ಯಾರ್ಥಿಗಳಂತೆ ಅಧ್ಯಾಪಕರನ್ನೂ ಆಡಳಿತಗಾರರನ್ನೂ ಅವರ ತಾಂತ್ರಿಕ ಜ್ಞಾನಕ್ಕೆ ಬದಲು ಅವರ ರಾಜಕೀಯ ದೃಷ್ಟಿಯ ಆಧಾರದ ಮೇಲೆ ತೂಗಿನೋಡುವುದು ಮೊದಲಾಯಿತು. 1958ರಲ್ಲಿ ರಾಷ್ಟ್ರ ಶೀಘ್ರವಾಗಿ ಆರ್ಥಿಕೋನ್ನತಿ ಸಾಧಿಸಲು ಆರಂಭಿಸಿದ್ದ ಬೃಹತ್ ಮುನ್ನಡೆಯು ಚಳವಳಿಯಲ್ಲಿ ವಿದ್ಯಾರ್ಥಿಗಳ ಉತ್ಪನ್ನ ಕಾರ್ಯಕ್ಕೆ ಇನ್ನೂ ಹೆಚ್ಚಿನ ಪ್ರಾಧಾನ್ಯ ಬಂತು. ಅವರು ಕಾರ್ಖಾನೆ ಮತ್ತು ಬೇಸಾಯ ಕ್ಷೇತ್ರಗಳಲ್ಲಿ ನಿರ್ವಹಿಸಬೇಕಾದ ಕಾರ್ಯವನ್ನು ಎರಡು ವರ್ಷಗಳ ಕಾಲ ತೀವ್ರಗೊಳಿಸಲಾಯಿತು. ಪ್ರೌಢಶಾಲೆಯ ಅಂತಸ್ತಿನ ಅನೇಕ ತಾಂತ್ರಿಕ ಶಾಲೆಗಳು ಕಾಲೇಜಿನ ಮಟ್ಟದವಾಗಿ ಪರಿವರ್ತನೆಯಾದುವು. 'ಕೆಲಸ-ವ್ಯಾಸಂಗದ ವಿಶ್ವವಿದ್ಯಾಲಯಗಳೂ ಬೇಕಾದ ಹಾಗೆ ಅಸ್ತಿತ್ವಕ್ಕೆ ಬಂದುವು. ಪಾಠಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಭರದಲ್ಲಿ ಕೆಲವು ಶಾಲೆಗಳನ್ನು ಸುಮ್ಮನೆ ಇಬ್ಭಾಗ ಮಾಡಲಾಯಿತು. ಇವೆಲ್ಲದರ ಫಲವಾಗಿ ಆಗಲೆ ಅರಂಭವಾಗಿದ್ದ ಶಿಕ್ಷಣ ಮಟ್ಟದ ಇಳಿತಾಯದ ಜೊತೆಗೆ ಬೋಧನೆಯೂ ಶಿಕ್ಷನದ ಆಡಳಿತವೂ ಗೊಂದಲಕ್ಕಿಡಾದುವು. ಶಿಕ್ಷಣದಲ್ಲಿ ಆಸಕ್ತಿಯುಳ್ಳವರು ಅದನ್ನು ಬಾಯಿಬಿಟ್ಟು ಹೇಳುವಂತಿರಲಿಲ್ಲ. ಹೇಳಿದರೆ ಅವರ ಬಣ್ಣ ಹೊರಕ್ಕೆ ಬಂದು ರಾಜಕೀಯವಾಗಿ ಉಚ್ಚಾಟನೆ ಕಾದಿರುತ್ತಿತ್ತು.

	ಬೃಹತ್ ಮುನ್ನಡೆ 1960ರ ವೇಳೆಗೆ ಪೂರ್ಣವಾಗಿ ವಿಫಲವಾಯಿತು. ಕಮ್ಯುನಿಸ್ಟ್ ನಾಯಕರು ಆರ್ಥಿಕ ಮುನ್ನಡೆಗೆ ಶಿಕ್ಷಣ ಮತ್ತು ತಂತ್ರಶಾಸ್ತ್ರಗಳನ್ನು ಬಲಪಡಿಸುವ ಅಗತ್ಯವನ್ನು ಆಗ ಕಂಡುಕೊಂಡರು. ಜೊತೆಗೆ ನಿಯೋಜಿತ ಆರ್ಥಿಕ ಪ್ರಗತಿ ಸಾಧನೆಯಾಗದ ಕಾರಣ ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಹಣಕಾಸಿಗೆ ಕತ್ತರಿಪ್ರಯೋಗ ಮಾಡಬೇಕಾಯಿತು. ಇದ್ದ ಅವಕಾಶದಲ್ಲಿ ಶಿಕ್ಷಣದ ಗುಣಮಟ್ಟವನ್ನೂ ತಾಂತ್ರಿಕ ಶಿಕ್ಷಣವನ್ನೂ ಹೆಚ್ಚಿಸುವ ಪ್ರಯತ್ನ ನಡೆಯಿತು.

	ಬೃಹತ್ ಮುನ್ನಡೆಯ ಚಳವಳಿಯ ಕಾಲದಲ್ಲಿ ಶಿಕ್ಷಣ ರಾಜಕೀಯದ ಕಟ್ಟುನಿಟ್ಟಿಗೆ ಸಿಕ್ಕಿ ಇಡೀ ಶಿಕ್ಷಣವ್ಯವಸ್ಥೆ ಅಸ್ತವ್ಯಸ್ತಗೊಂಡ ಅನಂತರ ಮುಂದಿನ ದಿನಗಳಲ್ಲಿ ಸರ್ಕಾರ ರಾಜಕೀಯ ಶಿಕ್ಷಣದ ಬಗ್ಗೆ ಅತ್ಯಂತ ನಿರಾಸಕ್ತಿಯನ್ನು ತಾಳುತ್ತ ಬಂತು. ಪಕ್ಷದ ನಾಯಕರು ಶಿಕ್ಷಣದಲ್ಲಿ ಕೈಹಾಕುವುದು ನಿಂತು ಕ್ರಮಕ್ರಮವಾಗಿ ವ್ಯವಸ್ಥೆಯಲ್ಲಿ ದೃಢತೆ ನೆಲೆಸುತ್ತ ಬಂತು. ವಿದ್ಯಾರ್ಥಿಗಳನ್ನು ಅಷ್ಟಾಗಿ ಕೆಲಸಕ್ಕೆ ಹಚ್ಚದೆ ಅವರು ನಿರಾತಂಕವಾಗಿ ತಮ್ಮ ಅಧ್ಯಯನದಲ್ಲಿ ಆಸಕ್ತಿಯಿಂದಿರುವ ಅವಕಾಶ ಕಲ್ಪನೆಯಾಯಿತು. ಜೊತೆಗೆ ವಿದ್ಯಾರ್ಥಿಗಳು ಅವರವರ ಅಭಿರುಚಿ ಆಸಕ್ತಿಗಳಿಗನುಗುಣವಾಗಿ ವಿಶೇಷ ಶಿಕ್ಷಣ ಪಡೆದು ರಾಷ್ಟ್ರಕ್ಕೆ ಅವರ ವಿಶಿಷ್ಟ ಸೇವೆ ಲಭಿಸುವಂತಾಗಬೇಕೆಂಬ ವಾದಕ್ಕೆ ಪಕ್ಷದ ಬೆಂಬಲ ದೊರೆತು ಸರ್ಕಾರ ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟಿತು. ಇಂಥ ವಿವೇಕವೂ ದೂರದೃಷ್ಟಿಯುತವೂ ಆದ ಧೋರಣೆಯ ಫಲವಾಗಿ ಶಿಕ್ಷಣ ಕ್ರಮಕ್ರಮವಾಗಿ ಉತ್ತಮಗೊಳ್ಳುತ್ತ ಬರುತ್ತಿತ್ತು. ಆದರೆ ಈ ಪ್ರಗತಿಯ ಯತ್ನಕ್ಕೆ 1966 ರಲ್ಲಿ ಮತ್ತೆ ಆಡಚಣೆಯೊದಗಿತು. ಆಗ ಆರಂಭಿಸಲಾದ ಸಾಂಸ್ಕøತಿಕ ಕ್ರಾಂತಿಯ ಫಲವಾಗಿ ಮತ್ತೆ ಶಿಕ್ಷಣವ್ಯವಸ್ಥೆ ಗೊಂದಲಕ್ಕೀಡಾಯಿತು. ರಾಜಕೀಯ, ಶಿಕ್ಷಣದ ಮೇಲೆ ಮತ್ತೆ ತನ್ನ ಪ್ರಭಾವವನ್ನು ಆರಂಭಿಸಿತು. ಪರಿಷ್ಕರಣವಾದವನ್ನು ಜನಜೀವನದ ಯಾವುದೇ ಕ್ಷೇತ್ರದಲ್ಲಾಗಲಿ ಖಂಡಿಸಿ ಕ್ರಾಂತಿಯ ಸಂದೇಶವನ್ನು ದೇಶದ ಮೂಲೆಮೂಲೆಗೂ ಕೊಂಡೊಯ್ಯಬೇಕಾಗಿ ಮಾವೊ ವಿದ್ಯಾರ್ಥಿಗಳಿಗೆ ಅನುಮತಿ ನೀಡಿದನು. ವಿದ್ಯಾರ್ಥಿ 'ಕೆಂಪುಸೇನೆ ಪಡೆಗಟ್ಟಿಕೊಂಡು ಬಂಡವಾಳ ಷಾಹಿ ಶ್ರೀಮಂತಸಂಸ್ಕøತಿಯ ಪ್ರವೃತ್ತಿಯನ್ನು ಬೆಳೆಸುತ್ತಿದ್ದ ಶಿಕ್ಷಣದ ಪರಿಷ್ಕರಣವಾದಿ ಪ್ರವೃತ್ತಿಯನ್ನು ಪುಡಿಗುಟ್ಟುವೆವೆಂದು ಕೊಂಡು ರಾಷ್ಟ್ರದಲ್ಲಿ ಅರಾಜಕತೆಯನ್ನೆಬ್ಬಿಸಿತು. ಶಾಲಾಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯನ್ನು ಉಳಿಸಿಕೊಳ್ಳುವುದು ಶ್ರೀಮಂತ ಕುಟುಂಬದ ಮಕ್ಕಳಿಗೆ ಮಾತ್ರ ಅವಕಾಶಕೊಡುವ ಯತ್ನವೆಂದು ಹಳೆಯ ವ್ಯವಸ್ಥೆಯನ್ನು ಧ್ವಂಸಮಾಡುವ ಮನೋಭಾವವನ್ನು ಬೆಳೆಸಿಕೊಂಡಿತು. ಹಿಂದೆಲ್ಲ ಸಾಮ್ರಾಜ್ಯಯುಗದಲ್ಲಿ ಅಚರಣೆಯಲ್ಲಿದ್ದ ಪರೀಕ್ಷಾಪದ್ಧತಿ ಶ್ರೀಮಂತ ಸುಸಂಸ್ಕøತ ಕುಟುಂಬಗಳವರು ಮಾತ್ರ ಮುಂದುವರಿಯಲೆಂದು ರೂಪುಗೊಂಡಿದ್ದ ಕುತಂತ್ರವೆಂದು ಘೋಷಿಸಿ ಅದನ್ನು ತೆಗೆದುಹಾಕಲು ಪ್ರಚಾರಮಾಡಿದ್ದಲ್ಲದೆ ಅದರ ಪರವಾಗಿದ್ದವರ ಮೇಲೆ ಆಕ್ರಮಣ ನಡೆಸಿತು. ಪಕ್ಷಕ್ಕೂ ಸರ್ಕಾರಕ್ಕೂ ಈ ಚಳವಳಿ ಪ್ರಿಯವೆನಿಸಿತ್ತು. ಪರೀಕ್ಷಾ ಪದ್ಧತಿಯಿಂದ ಇಷ್ಟೆಲ್ಲ ಅನರ್ಥವಾಗುತ್ತಿತ್ತೊ ಇಲ್ಲವೊ ಅಂತೂ 1966ರಲ್ಲಿ ಸರ್ಕಾರ ಆ ಪದ್ಧತಿಯನ್ನು ಶಾಸನವೊಂದರ ಮೂಲಕ ತೊಡೆದುಹಾಕಿತು.

	ಕಮ್ಯೂನಿಸ್ಟ್ ಶಿಕ್ಷಣದ ಸಾಮಾನ್ಯ ಉದ್ದೇಶ ; ಮಕ್ಕಳನ್ನು ಸಮಾಜವಾದ ರಾಷ್ಟ್ರದ ಪ್ರಜೆಗಳನ್ನಾಗಿ ಬೆಳೆಸುವುದು, ಸ್ವಾವಲಂಬನ ಶಕ್ತಿಯನ್ನು ಮೂಡಿಸುವುದು, ಸ್ಪರ್ಧೆಗೆ ಬದಲು ಸಹಕಾರ ಮನೋಭಾವವನ್ನೂ ತನ್ನ ಕಾರ್ಯ ಜನತೆಯ ಹಿತಕ್ಕೆಂಬ ಪ್ರಜ್ಞೆಯನ್ನೂ ರೂಢಿಸಿ ವರ್ಗರಹಿತ ಸಮಾಜವನ್ನು ಪೋಷಿಸುವುದೂ ಇಂದಿನ ಕಮ್ಯೂನಿಸ್ಟ್ ಶಿಕ್ಷಣದ ಸಾಮಾನ್ಯ ಉದ್ದೇಶಗಳಾಗಿವೆ. ಸಾಂಸ್ಕøತಿಕ ಕ್ರಾಂತಿಯ ಅನಂತರ ಈ ಉದ್ದೇಶಗಳು ಈಡೇರುವಂತೆ ಅಲ್ಲಿನ ಕಾರ್ಯಕ್ರಮಗಳನ್ನು ಬಹು ಎಚ್ಚರಿಕೆಯಿಂದ ಏರ್ಪಡಿಸಲಾಗುತ್ತಿದೆ.

	ನವಚೀನದಲ್ಲಿ ಸ್ತ್ರೀಯರು ಪುರುಷರಿಗೆ ಸಮಾನಹಕ್ಕನ್ನು ಹೊಂದಿದ್ದು ಸೇ. 90 ರಷ್ಟು ಮಂದಿ ಕಾರ್ಖಾನೆ, ಕಾರ್ಯಾಲಯ, ಹೊಲಗದ್ದೆ ಮುಂತಾದೆಡೆಗಳಲ್ಲಿ ಕೆಲಸಮಾಡಿ ರಾಷ್ಟ್ರದ ಆರ್ಥಿಕಾಭಿವೃದ್ಧಿಯಲ್ಲಿ ಭಾಗವಹಿಸುವರು. ಇದಕ್ಕೆ ಅನುಕೂಲಿಸುವಂತೆ ರಾಷ್ಟ್ರ ಅವರ ಮಕ್ಕಳ ಲಾಲನೆಪಾಲನೆಗಾಗಿ ತಕ್ಕ ವ್ಯವಸ್ಥೆ ಮಾಡಿದೆ. ದೇಶಾದ್ಯಂತ ಶಿಶುಕೇಂದ್ರಗಳೂ ಶಿಶುಗೃಹಗಳೂ ಕಿಂಡರ್‍ಗಾರ್ಟನ್ ಶಾಲೆಗಳೂ ಪ್ರಾಥಮಿಕ ಪೂರ್ವದ ಶಿಕ್ಷಣ ವ್ಯವಸ್ಥೆಯ ಅಂಗವಾಗಿ ಏರ್ಪಟ್ಟಿವೆ. ತಂದೆ ಅಥವಾ ತಾಯಿ ಮಕ್ಕಳನ್ನು ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ಅನಂತರ ತಮ್ಮ ಕೆಲಸಕ್ಕೆ ಹೋಗುವುದು ವಾಡಿಕೆ. ಸಾಮಾನ್ಯವಾಗಿ ತಾಯಂದಿರಿಗೆ 56 ದಿನಗಳ ಪ್ರಸವಕಾಲದ ರಜ ಮಾತ್ರವಿದ್ದು ಆನಂತರ ಅವರು ಕೆಲಸಕ್ಕೆ ಹೋಗಬೇಕಾಗಿರುವುದರಿಂದ ಮೇಲಿನ ವ್ಯವಸ್ಥೆ ಅನಿವಾರ್ಯವಾಗುತ್ತದೆ. ಸಾಮಾನ್ಯವಾಗಿ ಕಿಂಡರ್‍ಗಾರ್ಟನ್ ಮಾದರಿಯ ಶಿಶುಶಾಲೆಗಳು ಅಸ್ತಿತ್ವದಲ್ಲಿವೆ. ಆದರೆ ಅಲ್ಲಿನ ಕಾರ್ಯಕ್ರಮಗಳು ಪಾಶ್ಚಾತ್ಯ ಕಿಂಡರ್‍ಗಾರ್ಟನ್ನುಗಳಿಗಿಂತ ತೀರ ಭಿನ್ನವಾಗಿವೆ. ಸಮಾಜವಾದದ ಹಾಗೂ ವರ್ಗರಹಿತ ರಾಷ್ಟ್ರದಲ್ಲಿ ಸಹಕಾರ ಜೀವನವನ್ನೂ ಸ್ವಾವಲಂಬನೆಯನ್ನೂ ರಾಷ್ಟ್ರದ ಹಿತವನ್ನೂ ಸಾಧಿಸಲು ನೆರವಾಗುವ ಗುಣಗಳನ್ನು ಶಿಶುಶಾಲೆಗಳಲ್ಲೇ ರೂಢಿಗೆ ತರುವಂಥ ಕಾರ್ಯಕ್ರಮಗಳನ್ನು ಅಲ್ಲಿ ಕಾಣಬಹುದು. ಮಕ್ಕಳು ಆ ಶಾಲೆಗಳಲ್ಲಿ 7ನೆಯ ವರ್ಷದವರೆಗೂ ಇರಬಹುದು. ಚಿಕ್ಕ ಮಕ್ಕಳಾದರೂ ತಮ್ಮ ಕೆಲಸದಿಂದ ಉತ್ಪನ್ನಮುಖವಾಗಿರವಂತೆ ಅಂದಿನಿಂದ ರೂಢಿಗೆ ತರುತ್ತಿರುವುದು ಆ ಹಂತದ ಶಿಕ್ಷಣದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯೆನ್ನಬಹುದು.

	ಈ ಮಧ್ಯೆ ಪರಿಷ್ಕರಣವಾದಿಗಳ ವಿರುದ್ಧ ಚಳವಳಿಯ ಬೊಬ್ಬೆಹಾಕುತ್ತ ವಿದ್ಯಾರ್ಥಿಗಳು ಊರಿಂದೂರಿಗೆ ದಾಳಿಯಿಡುತ್ತಿದ್ದರು. ಶಾಲಾ ಕಾಲೇಜುಗಳು ಮುಚ್ಚಿಹೋದುವು. ವಿದ್ಯಾರ್ಥಿಗಳ ಖಂಡನೆಗೆ ತುತ್ತಾಗಿ ಅನೇಕ ಪಂಡಿತರೂ ಪ್ರಾಧ್ಯಾಪಕರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಲವು ವಿಶ್ವವಿದ್ಯಾನಿಲಯಗಳ ಅಧ್ಯಕ್ಷರೂ ರಾಜೀನಾಮೆ ಕೊಡಬೇಕಾಯಿತು. ಈ ಸಾಂಸ್ಕøತಿಕ ಕ್ರಾಂತಿಯಿಂದ ಯಾವ ಫಲ ಸಾಧನೆಯಾಯಿತೊ ಏನೋ ಅಂತೂ ಶಾಲಾಕಾಲೇಜುಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಗಿಲು ಮುಚ್ಚಿದುವು. ಆದರೆ ಚೀನದ ಶಿಕ್ಷಣವನ್ನು ಅದು ಪರಿಶುದ್ಧಗೊಳಿಸಿತೆಂಬ ಭಾವನೆ ಮಾವೊ ಮತ್ತು ಪಕ್ಷದ ಇತರ ನಾಯಕರಲ್ಲಿ ದೃಢವಾಗಿ ನೆಲೆಗೊಂಡಿತು. ಪ್ರತಿಶಾಲೆಯಲ್ಲೂ ಪಕ್ಷದ ತಂಡಗಳು ಏರ್ಪಟ್ಟು ಅವೇ ತಮ್ಮ ಸಹಪಾಠಿಗಳ ಶಿಕ್ಷಣಾಭಿವೃದ್ಧಿಯ ಮೌಲ್ಯಮಾಪನ ಮಾಡತೊಡಗಿದುವು. ಆ ಕಾರ್ಯದಲ್ಲಿ ವಿದ್ಯಾರ್ಜನೆ, ಜ್ಞಾನಕೌಶಲ್ಯಾದಿಗಳನ್ನು ಅಳೆಯುವುದಕ್ಕಿಂತ ವಿದ್ಯಾರ್ಥಿ ಎಷ್ಟರಮಟ್ಟಿಗೆ ಪಕ್ಷದ ಆದರ್ಶವನ್ನು ಅರಿತು ಅನುಸರಿಸುತ್ತಿರುವನು, ವರ್ಗಕಲಹ ಮತ್ತು ಉತ್ಪನ್ನಗಳಲ್ಲಿ ಎಷ್ಟರಮಟ್ಟಿಗೆ ಪಾತ್ರವಹಿಸುತ್ತಿರುವನು ಮುಂತಾದ ಅಂಶಗಳನ್ನು ಆಧಾರಮಾಡಿಕೊಂಡು ಮೌಲ್ಯಮಾಪನ ಮಾಡುವುದು ಪ್ರಚಾರಕ್ಕೆ ಬಂತು. 1950-60 ರ ತನಕ ಪ್ರಚಾರದಲ್ಲಿದ್ದ ಉತ್ಪನ್ನದ ಅಂಶ ಮತ್ತೆ ಶಿಕ್ಷಣದ ಪ್ರಮುಖ ಉದ್ದೇಶವಾಗುಳಿದುಕೊಂಡಿತು. ಯಾವುದೇ ಪದವೀ ಪರೀಕ್ಷೆಗೆ ಪ್ರವೇಶ ಕೋರುವ ಮುನ್ನ ವಿದ್ಯಾರ್ಥಿ ಐದು ವರ್ಷಕಾಲ ಶ್ರಮಜೀವನ ನಡೆಸಿರುವುದು ಅಗತ್ಯವಾಗುತ್ತ ಬಂತು. ಸಾಂಸ್ಕøತಿಕ ಕ್ರಾಂತಿಯ ಕಾವು ಇಳಿಯುತ್ತ ಹೋದಂತೆ ಶಿಕ್ಷಣದ ಮೇಲೆ ರಾಜಕೀಯ ಹತೋಟಿ ಕಡಿಮೆಯಾಗುವುದೆಂದು ಅನೇಕರು ಭಾವಿಸಿದ್ದರು. ಇದು ಬಹುಶಃ ಸಾಧ್ಯವಾಗಿದ್ದರೂ ಕಳೆದ 25 ವರ್ಷಗಳ ಇತಿಹಾಸವನ್ನು ಪರೀಕ್ಷಿಸಿದರೆ ಆ ಹತೋಟಿ ಒಂದೇ ಸಮನಾಗಿರದೆ ಕಾಲಕಾಲಕ್ಕೆ ತೀವ್ರತೆಯಲ್ಲಿ ಹೆಚ್ಚು ಕಡಿಮೆಯಾಗುತ್ತ ಮುಂದುವರಿಯುವುದೆಂದು ತೋರುತ್ತದೆ.

	ಟೈವಾನ್ ಶಿಕ್ಷಣ : ಎರಡನೆಯ ಮಹಾಯುದ್ಧ ಮುಗಿಯುವವರೆಗೆ ಟೈವಾನ್ ಜಪಾನಿನ ಆಕ್ರಮಣದಲ್ಲಿದ್ದುದರಿಂದ ಅಲ್ಲಿ ಜಪಾನಿನ ವಸಾಹತು ಆಡಳಿತವಿತ್ತು. ಸಾರ್ವತ್ರಿಕ ಕಡ್ಡಾಯ ಪ್ರಾಥಮಿಕ ಶಿಕ್ಷಣ ಆಚರಣೆಯಲ್ಲಿದ್ದರೂ ತಕ್ಕಷ್ಟು ಶಿಕ್ಷಣ ಸೌಲಭ್ಯವಿರಲಿಲ್ಲ. ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಸೌಲಭ್ಯ ಅಷ್ಟಾಗಿ ವಿಸ್ತರಿಸಲಿಲ್ಲ. ಚೀನದ ಗಣರಾಜ್ಯದ ಕೇಂದ್ರ ಸರ್ಕಾರ ಅಂತರ್ಯುದ್ಧದ ಫಲವಾಗಿ ತನ್ನ ಮುಖ್ಯಸ್ಥಳವನ್ನು ಮುಖ್ಯ ಭೂಭಾಗದಿಂದ ಈ ದ್ವೀಪಕ್ಕೆ ವರ್ಗಾಯಿಸಿದ ಮೇಲೆ ಇಲ್ಲಿನ ಶಿಕ್ಷಣದ ಅಭಿವೃದ್ಧಿಗೆ ಪ್ರಚೋದನೆ ದೊರಕಿತು. ಶಾಲಾಕಾಲೇಜುಗಳು ಸಂಖ್ಯೆಯಲ್ಲೂ ವೈವಿಧ್ಯದಲ್ಲೂ ಆವಶ್ಯಕತೆಗನುಗುಣವಾಗಿ ಹೆಚ್ಚಿದುವು ; ವಿದ್ಯಾರ್ಥಿಸೇರ್ಪಡೆ ಅಧಿಕ ಪ್ರಮಾಣದಲ್ಲಿ ಹೆಚ್ಚಿತು. 1920ರ ಸುಮಾರಿನಿಂದ ಜಪಾನಿನ ಶಿಕ್ಷಣಪದ್ಧತಿಯನ್ನು ತೊರೆದು ಅಮೆರಿಕದ ಶಿಕ್ಷಣಪದ್ಧತಿಯಂತೆ ಶಿಕ್ಷಣವನ್ನು ವ್ಯವಸ್ಥೆ ಮಾಡಲು ಆರಂಭವಾಗಿದ್ದ ಯತ್ನ ಕಮ್ಯೂನಿಸ್ಟರ ಆಳ್ವಿಕೆಗೊಳಗಾಗಿದ್ದ ಮುಖ್ಯ ಭೂಭಾಗದಲ್ಲಿ ಮೊಟಕಾದರೂ ಇಲ್ಲಿ ಮುಂದುವರಿಯಿತು. ಸದ್ಯದಲ್ಲಿ ದ್ವೀಪದ ಜನಸಂಖ್ಯೆಯ ಕಾಲುಭಾಗ ಶಾಲಾಕಾಲೇಜುಗಳಲ್ಲಿ ಸೇರಿರುವರು. ಅವರಲ್ಲಿ ವಿದ್ಯಾರ್ಥಿಗಳು ಕಿಂಡರ್‍ಗಾರ್ಟನ್ನುಗಳಲ್ಲಿ ಒಂದೂ ಲಕ್ಷ ಪ್ರಾಥಮಿಕ ಶಾಲೆಯಲ್ಲಿ 25 ಲಕ್ಷ ಪ್ರೌಢಶಾಲೆಯಲ್ಲಿ 10 ಲಕ್ಷ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ 1 ಳಿ ಲಕ್ಷ ವಿದ್ಯಾರ್ಥಿಗಳೂ ಓದುತ್ತಿರುವರು.

	ಪ್ರಾಥಮಿಕ ಶಿಕ್ಷಣ : ವಸಾಹತು ಕಾಲಕ್ಕೆ ಹಿಂದಿನಿಂದಲೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ಆಚರಣೆಯಲ್ಲಿದ್ದರೂ ತಕ್ಕಷ್ಟು ಪಾಠಶಾಲೆಗಳಾಗಲಿ ನಿಷ್ಠೆಯಿಂದ ಆಚರಣೆಗೆ ತರುವುದಾಗಲಿ ಇರಲಿಲ್ಲ. 6 ವರ್ಷಗಳ ಕಾಲದ ಕಡ್ಡಾಯ ಶಿಕ್ಷಣದ ಕಾಲಾವಧಿಯನ್ನು 1968 ರಲ್ಲಿ 9 ವರ್ಷಕ್ಕೆ ಹೆಚ್ಚಿಸಲಾಯಿತು. ಅದುತನಕ ಅಸ್ತಿತ್ವದಲ್ಲಿದ್ದ 6-3-3-4 ರ ಶಿಕ್ಷಣ ವ್ಯವಸ್ಥೆ ಈಗ 9-3-4 ಕ್ಕೆ ಮಾರ್ಪಟ್ಟಿತು. ಕಡ್ಡಾಯ ಶಿಕ್ಷಣದ 9 ವರ್ಷಗಳ ಕಾಲವನ್ನು ಒಂದು ಹಂತದ ಶಾಲೆಗೆ ನಿಗದಿ ಮಾಡುವಂತಾಯಿತು. ನಿಷ್ಠೆಯಿಂದ ಕಡ್ಡಾಯ ಶಿಕ್ಷಣವನ್ನು ಆಚರಣೆಗೆ ತಂದುದರ ಫಲವಾಗಿ ಆ ವಯೋಮಾನದ ಸೇ. 97ಕ್ಕೂ ಹೆಚ್ಚು ಮಂದಿ ಶಾಲೆಗೆ ಸೇರುವಂತಾಯಿತು. ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಶಾಲೆಗೆ ಸೇರಿರುವರು.

	ಪ್ರಾಥಮಿಕ ಪೂರ್ವದ ಶಿಕ್ಷಣ : ಇಲ್ಲಿ ಶಿಕ್ಷಣ ಅಮೆರಿಕದ ಮಾದರಿಯನ್ನು ಅನುಸರಿಸಿ ವ್ಯವಸ್ಥೆಗೊಂಡಿರುವುದರಿಂದ ಪ್ರಾಥಮಿಕ ಪೂರ್ವದ ಹಂತದಲ್ಲಿ ಕಿಂಡರ್ ಗಾರ್ಟನ್ ಮಾದರಿಯ ಶಾಲೆಗಳನ್ನು ಆರಂಭಿಸಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅವುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

	ಪ್ರೌಢಶಿಕ್ಷಣ : ಆರು ವರ್ಷದ ಪ್ರೌಢಶಿಕ್ಷಣದ ಮೊದಲ ಹಂತ ಕಡ್ಡಾಯ ಶಿಕ್ಷಣದ ಅವಧಿಗೆ ಸೇರಿಹೋದ್ದರಿಂದ ಈಗ ಅದು ಮೂರು ವರ್ಷದ ಉನ್ನತ ಪ್ರೌಢಶಿಕ್ಷಣವಾಗಿ ಉಳಿದಿದೆ. ಇದನ್ನು ಎರಡು ಮುಖಗಳಲ್ಲಿ ವ್ಯವಸ್ಥೆಗೊಳಿಸಿದೆ -ಸಾಂಸ್ಕøತಿಕ ಮತ್ತು ಔದ್ಯೋಗಿಕ ಪ್ರೌಢಶಾಲೆಗಳು, ಸಾಂಸ್ಕøತಿಕ ಪ್ರೌಢಶಾಲೆಗಳಲ್ಲಿ 80ರಷ್ಟು ವಿದ್ಯಾರ್ಥಿಗಳಿದ್ದರೆ ಔದ್ಯೋಗಿಕ ಪ್ರೌಢಶಾಲೆಗಳಲ್ಲಿ 20ರಷ್ಟು ಮಾತ್ರ ವಿದ್ಯಾರ್ಥಿಗಳಿರುವರು. ಕೃಷಿ, ವಾಣಿಜ್ಯ, ಉದ್ಯೋಗ ಔಪಚಾರಿಕೆ, ಗೃಹಕಾರ್ಯ ನಿರ್ವಹಣೆ ಅಲ್ಲಿ ಪ್ರಚಾರದಲ್ಲಿರುವ ವಿಷಯಗಳು.

	ಉನ್ನತ ಶಿಕ್ಷಣ : ಉನ್ನತ ಶಿಕ್ಷಣ ಜೂನಿಯರ್ ಕಾಲೇಜುಗಳಲ್ಲೂ ವಿಶ್ವವಿದ್ಯಾನಿಲಯಗಳಲೂ ವ್ಯವಸ್ಥೆಗೊಂಡಿದೆ. 1960ರ ವೇಳೆಗೆ 79 ಜೂನಿಯರ್ ಕಾಲೇಜುಗಳೂ 13 ಕಾಲೇಜುಗಳೂ 9 ವಿಶ್ವವಿದ್ಯಾನಿಲಯಗಳೂ ಇದ್ದುವು. ಪ್ರಥಮ ಪದವಿಯ ನಾಲ್ಕು ವರ್ಷದ ಶಿಕ್ಷಣ ಕಾಲೇಜುಗಳಲ್ಲೂ ವಿಶ್ವವಿದ್ಯಾನಿಲಯದ್ಲಲೂ ಏರ್ಪಟ್ಟಿದೆ. ಒಂದು ಸಂಸ್ಥೆ ವಿಶ್ವವಿದ್ಯಾಲಯ ಆಗಬೇಕಾದರೆ ತನಗೆ ಸೇರಿದಂತೆ ಕಲಾಶಾಸ್ತ್ರ, ವಿಜ್ಞಾನ, ಕೃಷಿ, ವಾಣಿಜ್ಯ, ವೈದ್ಯ, ನ್ಯಾಯ, ಇಂಜಿನಿಯರಿಂಗ್-ಇವಾವುದಾದರೂ ಮೂರು ಕಾಲೇಜುಗಳನ್ನು ಹೊಂದಿರಬೇಕು. ಉನ್ನತ ಶಿಕ್ಷಣದಲ್ಲಿರುವ ಸುಮರು 1ಳಿ ಲಕ್ಷ ವಿದ್ಯಾರ್ಥಿಗಳಲ್ಲಿ ಸೇ. 20ರಷ್ಟು ಇಂಜಿನಿಯರಿಂಗ್ ಕಾಲೇಜುಗಳಲ್ಲೂ 10ರಷ್ಟು ವೈದ್ಯಶಾಸ್ತ್ರದ ಕಾಲೇಜುಗಳಲ್ಲೂ 5ರಷ್ಟು ಕೃಷಿಕಾಲೇಜುಗಳಲ್ಲೂ ಓದುತ್ತಿರುವರು ಮಿಕ್ಕವರು ಸಾಂಸ್ಕøತಿಕ ಕಾಲೇಜುಗಳಲ್ಲಿರುವವರು. ಕಲಾಶಾಸ್ತ್ರದ ವಿದ್ಯಾರ್ಥಿಗಳಿಗಿಂತ ವಿಜ್ಞಾನಶಾಸ್ತ್ರದ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವುದು.

	ವಯಸ್ಕರ ಶಿಕ್ಷಣ : ಕಡ್ಡಾಯ ಶಿಕ್ಷಣ ಆಚರಣೆಯಲ್ಲಿರುವುದರಿಂದ ಅನಕ್ಷರಸ್ಥರ ಸಂಖ್ಯೆ ತೀರ ಕಡಿಮೆಯಿದ್ದರೂ ರಾಷ್ಟ್ರ ಘಟನೆಯ ಪ್ರಕಾರ ಪ್ರಾಥಮಿಕ ಶಿಕ್ಷಣವನ್ನು ಪಡೆಯಲಾಗದಿದ್ದ ವಯಸ್ಕರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ. ಅದು ಬಹುಮಟ್ಟಿಗೆ ಸಾಮಾಜಿಕ ಶಿಕ್ಷಣದ ಸ್ವರೂಪವನ್ನು ತಾಳಿದೆ.

	ಅಧ್ಯಾಪಕರ ಶಿಕ್ಷಣ : ಪ್ರಾಥಮಿಕ ಶಾಲೆಯ ಅಧ್ಯಾಪಕರ ಪ್ರತಿಕ್ಷಣ ನಾರ್ಮಲ್ ಸ್ಕೂಲುಗಳಲ್ಲೂ ಪ್ರೌಢಶಾಲೆಯ ಅಧ್ಯಾಪಕರ ಶಿಕ್ಷಣ ನಾರ್ಮಲ್ ಕಾಲೇಜುಗಳಲ್ಲೂ ವ್ಯವಸ್ಥೆಗೊಂಡಿದೆ. ಈಚೆಗೆ ಅವೆರಡು ಹಂತಗಳ ಶಿಕ್ಷಣದ ಮಟ್ಟವನ್ನು ಉತ್ತಮಪಡಿಸುವ ಯತ್ನ ನಡೆದಿದೆ. ಟೈವಾನಿನ ನಾರ್ಮಲ್ ಕಾಲೇಜು ಈಗ ಪೂರ್ಣಪ್ರಮಾಣದ ನಾರ್ಮಲ್ ವಿಶ್ವವಿದ್ಯಾಲಯವಾಗಿ ವಿಸ್ತರಿಸಿದೆ. ನಾರ್ಮಲ್ ಸ್ಕೂಲುಗಳನ್ನು ಜೂನಿಯರ್ ನಾರ್ಮಲ್ ಕಾಲೆಜುಗಳನ್ನಾಗಿ ಪರಿವರ್ತಿಸುವ ಯತ್ನವೂ ನಡೆಯುತ್ತಿದೆ. ಅಲ್ಲಿ 9 ವರ್ಷದ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ವಿದ್ಯಾರ್ಥಿಗಳು ಎರಡು ವರ್ಷದ ಪ್ರಶಿಕ್ಷಣವನ್ನು ಪಡೆದು ಪ್ರಾಥಮಿಕ ಶಾಲೆಯ ಶಿಕ್ಷಕರಾಗುವರು.

	ಪರೀಕ್ಷಾ ವ್ಯವಸ್ಥೆ : ಪ್ರಾಚೀನ ಮತ್ತು ಮಧ್ಯಯುಗಗಳ ಚೀನದಲ್ಲಿದ್ದ ಪರೀಕ್ಷೆಯ ಪ್ರಾಮುಖ್ಯ ಸ್ವಲ್ಪಮಟ್ಟಿಗೆ ಇಲ್ಲಿ ಉಳಿದುಕೊಂಡೇ ಬಂದಿದೆ. ಇದು ತನಕ ಪ್ರಾಥಮಿಕ ಶಾಲೆಯ ಹಂತದಲ್ಲಿದ್ದ ಪರೀಕ್ಷೆಯನ್ನು 1968ರಿಂದ ತೆಗೆದುಹಾಕಿದೆ. ಇದರಿಂದ ಪ್ರಾಥಮಿಕ ಶಾಲೆಯಿಂದ ವಿದ್ಯಾರ್ಥಿಗಳು ನೇರವಾಗಿ ಜೂನಿಯರ್ ಪ್ರೌಢಶಾಲೆಗೆ ಸೇರಬಹುದು. 9 ವರ್ಷದ ಶಿಕ್ಷಣವನ್ನು ಕಡ್ಡಾಯಮಾಡಿರುವ ಪ್ರಯುಕ್ತ ಪ್ರಾಥಮಿಕ ಶಾಲೆಯೊಡನೆ ಜೂನಿಯರ್ ಪ್ರೌಢಶಾಲೆಯನ್ನು ಸಮಾವೇಶಗೊಳಿಸಿಕೊಂಡು 9 ವರ್ಷಗಳ, ಪರಿಣಾಮಕಾರಿಯಾಗಬಲ್ಲ ಪಠ್ಯಕ್ರಮವನ್ನು ಈಗ ರೂಪಿಸುವ ಯತ್ನದಲ್ಲಿ ಶಿಕ್ಷಣವೇತ್ತರು ತೊಡಗಿರುವರು.

	ನೂತನ ಪ್ರವೃತ್ತಿಗಳು : ಟೈವಾನನ್ನು ಜಪಾನ್ ಚೀನಕ್ಕೆ ವಹಿಸಿದಮೇಲೆ ರಾಷ್ಟ್ರೀಯ ಭಾವನೆಯ ಬೆಳೆವಣಿಗೆ ಶಿಕ್ಷಣದ ಪ್ರಮುಖ ಉದ್ದೇಶಗಳಲ್ಲೊಂದಾಗುತ್ತ ಬಂದಿದೆ. ಚೀನೀ ಆಡುಭಾಷೆಯನ್ನು ಸಾರ್ವತ್ರಿಕ ಸಾಮಾನ್ಯ ಸ್ವರೂಪಕ್ಕೆ ಮಾರ್ಪಡಿಸಿ ಪ್ರಾದೇಶಿಕ ಪ್ರಭೇದಗಳನ್ನು ನಿವಾರಿಸುವದರ ಮೂಲಕ ಅಲ್ಲಿನ ಶಿಕ್ಷಣ ರಾಷ್ಟ್ರೀಯ ಭಾವನೆಯನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡುತ್ತಿದೆ. ವೈಜ್ಞಾನಿಕ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲು ರಾಷ್ಟ್ರೀಯ ವಿಜ್ಞಾನಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಂಶೋಧನೆಗಳಿಗೆ ಅಗತ್ಯವಾದ ಧನಸಹಾಯವನ್ನೂ ನೀಡಲಾಗುತ್ತಿದೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಮುಖ್ಯವಾಗಿ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮತ್ತು ಸಂಶೋಧನೆಗಳನ್ನು ಗುಣದಲ್ಲೂ ಪ್ರಮಾಣದಲ್ಲೂ ಉತ್ತಮಪಡಿಸಲಾಗುತ್ತಿದೆ. ನ್ಯಾಷನಲ್ ಟ್ಸಿಂಗುಹಾ ವಿಶ್ವವಿದ್ಯಾಲಯದ ನ್ಯೂಕ್ಲಿಯರ್ ಇನ್ಸ್‍ಟಿಟ್ಯೂಟ್, ಚಯೋಟುಂಗ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಇನ್ಸ್‍ಟಿಟ್ಯೂಟ್ ಉನ್ನತಮಟ್ಟದ ಸಂಶೋಧನೆಗೆ ಹೆಸರಾಗಿವೆ.
(ಎನ್.ಎಸ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ